ಹರಿಹರ: ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಗಂಗನರಸಿ ಗ್ರಾಮಸ್ಥರು ಖಾಸಗಿ ಆಸ್ಪತ್ರೆಯ ವೈದ್ಯರ ಮೇಲೆ ದೂರು ದಾಖಲಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ವೈದ್ಯರ ನಿರ್ಲಕ್ಷ್ಯಕ್ಕೆ ಕಂದಮ್ಮ ಬಲಿ... ಖಾಸಗಿ ಆಸ್ಪತ್ರೆ ವೈದ್ಯರ ವಿರುದ್ಧ ದೂರು! ನಗರದ ಪೋಸ್ಟ್ ಆಫೀಸ್ ರಸ್ತೆಯಲ್ಲಿರುವ ರೇನ್‌ಬೋ ಮಕ್ಕಳ ಖಾಸಗಿ ಆಸ್ಪತ್ರೆಯ ವೈದ್ಯರಾದ ಡಾ.ನಜೀಬುಲ್ಲಾ ಖಾನ್‌ರವರ ವಿರುದ್ಧ ದೂರು ದಾಖಲಾಗಿದೆ. ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ತಿಳಿದ ಗಂಗನರಸಿ ಗ್ರಾಮದ ನೂರಾರು ಜನರು ಆಸ್ಪತ್ರೆಗೆ ಆಗಮಿಸಿ ವೈದ್ಯರ ಹಾಗೂ ಸಿಬ್ಬಂದಿಗಳನ್ನು ಪ್ರಶ್ನಿಸಿದ್ದಾರೆ.
ಆದರೆ, ಮಗುವಿನ ಸಾವಿನ ಬಗ್ಗೆ ಸರಿಯಾದ ಮಾಹಿತಿ ನೀಡದೆ ಬೇಕಾಬಿಟ್ಟಿ ವರ್ತಿಸುತ್ತಿದ್ದಾರೆ ಎಂದು ಮಗುವಿನ ಸಂಬಂಧಿಕರು ಆಕ್ರೋಶಗೊಂಡ ಪರಿಣಾಮ ಆಸ್ಪತ್ರೆ ಸಿಬ್ಬಂದಿ ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯುತ್ತಿದಂತೆ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ತಕ್ಷಣ ಮಾಹಿತಿ ತಿಳಿದ ಸಿಪಿಐ ಶಿವಪ್ರಸಾದ್, ಪಿಎಸ್‌ಐ ರವಿಕುಮಾರ, ಆಸ್ಪತ್ರೆಗೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ನಂತರ ವೈದ್ಯರ ಹಾಗೂ ಮಗುವಿನ ಪೋಷಕರ ಅಹವಾಲುನ್ನು ಅಲಿಸಿ ಮಗುವಿನ ಮೃತ ದೇಹವನ್ನು ಶವ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು. ವೈದ್ಯರ ವಿರುದ್ಧ ಮಗುವಿನ ಪೋಷಕರು ನಗರ ಠಾಣೆಯಲ್ಲಿ ದೂರು ದಾಖಲಿಸಿದರು.
ಮಗುವಿನ ಪೋಷಕರಾದ ಪ್ರತ್ಯಕ್ಷದರ್ಶಿ ರಾಯಪ್ಪಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಗಂಗನರಸಿ ಗ್ರಾಮದ ನನ್ನ ಸೊಸೆಯಾದ ಸವಿತಾ ಪಂಚಾಕ್ಷರಯ್ಯ ಅವರ 5 ತಿಂಗಳ ಹೆಣ್ಣು ಮಗು ಜ್ವರದಿಂದ ಬಳಲುತ್ತಿತ್ತು. ಚಿಕಿತ್ಸೆಗೆ ಎಂದು ಬುಧವಾರ ಬೆಳಗ್ಗೆ 9:30 ಕ್ಕೆ ಹರಿಹರ ನಗರದ ರೇನ್‌ಬೋ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೆವು. ವೈದ್ಯರು ಮಗುವನ್ನು ಪರೀಕ್ಷಿಸಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದರು. ಮಧ್ಯಾಹ್ನ 3 ಗಂಟೆಯ ನಂತರ ಮಗುವಿಗೆ ಉಸಿರಾಟದಲ್ಲಿ ಏರುಪೇರು ಉಂಟಾಗಿದ್ದನ್ನು ಗಮನಿಸಿದ ಮಗುವಿನ ತಾಯಿಯು ತಕ್ಷಣ ಶುಶ್ರೂಕಿಯರ ಗಮನಕ್ಕೆ ತಂದಾಗ ಊಟಕ್ಕೆಂದು ಮನೆಗೆ ತೆರಳಿದ್ದ ವೈದ್ಯರಿಗೆ ದೂರವಾಣಿ ಮೂಲಕ ಮಾಹಿತಿಯನ್ನು ತಿಳಿಸಿದ್ದಾರೆ. ಅದರೆ, ವೈದ್ಯರು ಸಮಯಕ್ಕೆ ಸರಿಯಾಗಿ ಬಾರದೆ ಸಂಜೆ 5 ಗಂಟೆಯ ನಂತರ ಆಸ್ಪತ್ರೆಗೆ ಆಗಮಿಸಿ ಮಗುವನ್ನು ಪರೀಕ್ಷಿಸಿ ನೋಡಿ ತಕ್ಷಣ ಮಗುವನ್ನು ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದರು ಅಂತಾ ತಿಳಿಸಿದರು.
ಗಾಬರಿಗೊಂಡ ಪೋಷಕರು ತಕ್ಷಣ ಖಾಸಗಿ ವಾಹನದಲ್ಲಿ ಮಗುವನ್ನು ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ದಾಖಲಿಸಿದಾಗ ಮಗುವನ್ನು ಪರೀಕ್ಷಿಸಿದ ವೈದ್ಯರು ಮೃತ ಪಟ್ಟಿದೆ ಎಂದು ತಿಳಿಸಿದ್ದಾರೆ. ಆಸ್ಪತೆಯ ಸಿಬ್ಬಂದಿ ವೈದ್ಯರ ಗಮನಕ್ಕೆ ಮಗುವಿನ ಆರೋಗ್ಯದ ಬಗ್ಗೆ ತಿಳಿಸಿದ ತಕ್ಷಣಕ್ಕೆ ಬಂದು ಚಿಕಿತ್ಸೆ ನೀಡಿದ್ದರೆ ನಮ್ಮ ಮಗು ಬುದುಕುತ್ತಿತ್ತು, ಅದರೆ ವೈದ್ಯರ ನಿರ್ಲಕ್ಷದಿಂದ ಮಗು ಸಾವನ್ನಪ್ಪಿದೆ ಎಂದು ಕುಟುಂಬಸ್ಥರು ಆರೋಪಿಸಿದರು.