ದಾವಣಗೆರೆ: ಕೊರೊನಾ ವೈರಸ್ಗೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಲಸಿಕೆ ಲಭ್ಯವಾಗುವ ಎಲ್ಲ ಸಾಧ್ಯತೆಗಳಿದ್ದು, ಲಸಿಕೆ ನೀಡಿಕೆ ಕಾರ್ಯದಲ್ಲಿ ದಾವಣಗೆರೆ ಜಿಲ್ಲೆಯು ರಾಷ್ಟ್ರ ಮತ್ತು ರಾಜ್ಯಕ್ಕೇ ಮಾದರಿಯಾಗುವ ರೀತಿ ಕಾರ್ಯಗತಗೊಳಿಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೋವಿಡ್-19 ಲಸಿಕೆ ಕಾರ್ಯವನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲಸಿಕೆ ಅಭಿವೃದ್ಧಿ ಪಡಿಸುವ ಕಾರ್ಯ ದೇಶದಲ್ಲಿ ಅಂತಿಮ ಹಂತದಲ್ಲಿದ್ದು, ಯಾವುದೇ ಸಮಯದಲ್ಲಿ ಲಸಿಕೆಯು ಬಳಕೆಗೆ ಲಭ್ಯವಾಗುವ ಸಾಧ್ಯತೆಗಳಿವೆ. ಲಸಿಕೆಯನ್ನು ಮೊದಲ ಆದ್ಯತೆಯಾಗಿ ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರೂ ಸೇರಿದಂತೆ ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎಲ್ಲರಿಗೂ ನೀಡಬೇಕೆಂಬುದು ಸರ್ಕಾರದ ನಿಲುವಾಗಿದೆ. ಇದರಂತೆಯೇ ಜಿಲ್ಲೆಯಲ್ಲಿಯೂ ಇದಕ್ಕಾಗಿ ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿರುವ ಸರ್ಕಾರಿ ಹಾಗೂ ಮಾನ್ಯತೆ ಹೊಂದಿರುವ ಖಾಸಗಿ ಎಲ್ಲಾ ಆಸ್ಪತ್ರೆಗಳ ವೈದ್ಯರು, ನರ್ಸ್‍ಗಳು, ಪ್ರಯೋಗಶಾಲೆ ನಿರ್ವಹಿಸುವವರು, ಚಾಲಕರು, ಕ್ಲರ್ಕ್ಗಳು, ಡಿ ಗ್ರೂಪ್ ಸಿಬ್ಬಂದಿ ಸೇರಿದಂತೆ ಎಲ್ಲ ಆರೋಗ್ಯ ಕಾರ್ಯಕರ್ತರ ವಿವರಗಳು, ವೈದ್ಯಕೀಯ ಕಾಲೇಜುಗಳು, ದಂತವೈದ್ಯಕೀಯ, ಪ್ಯಾರಾಮೆಡಿಕಲ್, ಆಯುರ್ವೇದಿಕ್ ಸೇರಿದಂತೆ ಎಲ್ಲರ ಸಮಗ್ರ ವಿವರಗಳು ಅಂಕಿ-ಅಂಶ ಸಹಿತ ಎರಡು ದಿನಗಳ ಒಳಗಾಗಿ ಸಿದ್ಧವಾಗಬೇಕು. ಜಿಲ್ಲೆಗೆ ಪ್ರಥಮ ಹಂತದಲ್ಲಿ ಬೇಕಾಗಬಹುದಾದ ಲಸಿಕೆ ಡೋಸ್‍ಗಳ ಸಂಖ್ಯೆಯನ್ನು ವಿವರ ಸಹಿತ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ಪ್ರತಿ ಗುರುವಾರ ಕೋವಿಡ್ ಲಸಿಕೆಗೆ ಸಂಬಂಧಿಸಿದ ಕಾರ್ಯಪಡೆ ಸಮಿತಿ ಸಭೆಯನ್ನು ನಡೆಸಿ, ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಲಾಗುವುದು, ಅಲ್ಲದೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರತಿ ತಾಲೂಕಿಗೆ ಒಬ್ಬರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು. ಈ ಹಿಂದಿನ ಲಸಿಕಾ ಕಾರ್ಯಕ್ರಮಗಳಿಗಿಂತ ಇದು ಹೆಚ್ಚಿನ ಮಹತ್ವದ್ದಾಗಿದ್ದು, ಪ್ರತಿಯೊಬ್ಬರಲ್ಲೂ ಆತ್ಮಸ್ಥೈರ್ಯ ಮೂಡಿಸುವುದು ಅಗತ್ಯವಾಗಿದೆ ಎಂದರು.
ವದಂತಿಗಳಿಗೆ ಕಡಿವಾಣ :
ಕೋವಿಡ್ ಲಸಿಕೆ ಕಾರ್ಯಕ್ರಮ ಜಾರಿಗೊಳಿಸುವ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಇಲ್ಲಸಲ್ಲದ ವದಂತಿಗಳು, ತಪ್ಪು ಕಲ್ಪನೆಗಳು ಹರಡದಂತೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಲಸಿಕೆ ಬಳಕೆಗೆ ಬಂದ ಕೂಡಲೆ, ಎಲ್ಲರಿಗಿಂತ ಮೊದಲು ತಾವೇ ಲಸಿಕೆ ಹಾಕಿಸಿಕೊಂಡು, ಇತರರಿಗೆ ಪ್ರೇರೇಪಿಸುವ ಕೆಲಸ ಮಾಡುವುದಾಗಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.