ದಾವಣಗೆರೆ: ಮಹಾನಗರ ಪಾಲಿಕೆಯ ಚುನಾವಣಾ ಕಣ ರಂಗೇರಿದ್ದು, ಇದರ ನಡುವೆ ಕಾಂಗ್ರೆಸ್ ಪಕ್ಷ ಎಡವಟ್ಟೊಂದನ್ನು ಮಾಡಿಕೊಂಡಿದೆ. 45ನೇ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿ ಎಲ್.ಹೆಚ್.ಸಾಗರ್ ಅವರ ನಾಮಪತ್ರ ತಿರಸ್ಕೃತಗೊಂಡಿದೆ.
ಪರಿಶಿಷ್ಟ ಜಾತಿಗೆ ಮೀಸಲಾಗಿರುವ 45ನೇ ವಾರ್ಡಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಾಗರ್ ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದಾರೆ. ಸಾಗರ್ ಮಹಾನಗರ ಪಾಲಿಕೆಯ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಪ್ರತಿ ತಿಂಗಳು ಪಾಲಿಕೆಯಿಂದ ವೇತನ ಪಡೆಯುತ್ತಿದ್ದಾರೆ. ಇದರಿಂದಾಗಿ ನಾಮಪತ್ರವನ್ನು ತಿರಸ್ಕೃತಗೊಳಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಮೇದುವಾರಿಕೆ ಅರ್ಜಿ ಸಲ್ಲಿಸುವುದರ ಜೊತೆಗೆ ಪ್ರಮಾಣ ಪತ್ರದಲ್ಲಿ ತಾನು ಮಹಾನಗರ ಪಾಲಿಕೆಯ ಪೌರ ಕಾರ್ಮಿಕನಾಗಿರುವ ಬಗ್ಗೆ ಸಾಗರ್ ಉಲ್ಲೇಖ ಮಾಡಿದ್ದರು. ಕಳೆದ ಐದು ವರ್ಷಗಳಿಂದ ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಪೌರ ಕಾರ್ಮಿಕರಾಗಿದ್ದ ಸಾಗರ್, ಇತ್ತೀಚೆಗೆ ಒಂದು ವರ್ಷದ ಹಿಂದೆ ನೇರ ನೇಮಕಾತಿಯಲ್ಲಿ ಪೌರ ಕಾರ್ಮಿಕರಾಗಿ ಆಯ್ಕೆಯಾಗಿದ್ದರು.
ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ನಾಮಪತ್ರಗಳಲ್ಲಿ 65 ನಾಮಪತ್ರಗಳು ತಿರಸ್ಕೃತಗೊಂಡಿದ್ದು, 266 ನಾಮಪತ್ರಗಳು ಕ್ರಮಬದ್ಧವಾಗಿವೆ. ಇನ್ನು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ನಾಳೆ ಕೊನೆ ದಿನಾಂಕವಾಗಿದೆ. ನವೆಂಬರ್ 12ರಂದು ಚುನಾವಣೆ ನಡೆಯಲಿದ್ದು, 14ರಂದು ಫಲಿತಾಂಶ ಹೊರ ಬೀಳಲಿದೆ.