ದಾವಣಗೆರೆ: ವ್ಯಾಲೆಂಟೈನ್ಸ್ ಡೇ ದಿನದಂದು ಪ್ರೇಮ ನಿವೇದನೆ ಮಾಡಿಕೊಂಡು ಮನದಾಳದಲ್ಲಿ ಹುದುಗಿದ್ದ ಪ್ರೀತಿ ಹೇಳಿಕೊಳ್ಳುವವರೇ ಹೆಚ್ಚು. ಆದ್ರೆ, ಪ್ರೇಮಿಗಳ ದಿನದಂದು ಲವ್ ಮಾಡಿ ಮದುವೆ ಆಗೋರು ತೀರಾ ಕಡಿಮೆ. ದಾವಣಗೆರೆ ಜಿಲ್ಲಾಧಿಕಾರಿ ಡಾ. ಗೌತಮ್ ಬಗಾದಿ ಮತ್ತು ಜಿಲ್ಲಾ ಪಂಚಾಯತ್ ಸಿಇಒ ಸಿ. ಆಶ್ವತಿ ವ್ಯಾಲೆಂಟೈನ್ಸ್ ಡೇ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕೇರಳದ ಕ್ಯಾಲಿಕಟ್ನ ಕೋಯಿಕ್ಕೋಡ್ನ ಟಾಗೋರ್ ಹಾಲ್ನಲ್ಲಿ ಕೇರಳ ಸಂಪ್ರದಾಯದಂತೆ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ ಈ ಜೋಡಿ. ಕೇರಳದ ಪ್ರಸಿದ್ಧ ಉಡುಪು ಕಾಂಚಿಪುರಂ ರೇಷ್ಮೆ ಸೀರೆ ಮತ್ತು ಕೆಂಪು ಬಣ್ಣದ ಬ್ಲೌಸ್, ಬಂಗಾರದ ಒಡವೆಗಳನ್ನ ಧರಿಸಿ ಅಶ್ವತಿ ಮಿರ ಮಿರ ಮಿಂಚಿದರೆ, ಡಿಸಿ ಗೌತಮ್ ಬಗಾದಿ ಬಿಳಿ ಪಂಚೆ, ಬಿಳಿ ಅಂಗಿ, ಶಾಲು ತೊಟ್ಟು ಮಿನುಗಿದರು.
ಸಿಂಪಲ್ ಆಗಿ ನಡೀತು ವಿವಾಹ:
ದಾವಣಗೆರೆ ಜಿಲ್ಲೆಯಲ್ಲಿ ಖಡಕ್ ಐಎಎಸ್ ಅಧಿಕಾರಿಗಳೆಂದೇ ಫೇಮಸ್ ಆಗಿದ್ದ ಗೌತಮ್ ಬಗಾದಿ ಮತ್ತು ಅಶ್ವತಿ ಸಿಂಪಲ್ ಆಗಿ ಮದುವೆಯಾಗುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಟಾಗೋರ್ ಹಾಲ್ನಲ್ಲಿ ನಡೆದ ಈ ವಿವಾಹಕ್ಕೆ ಉಭಯ ಕುಟುಂಬಗಳ ಆಪ್ತರು, ಸ್ನೇಹಿತರಿಗಷ್ಟೇ ಆಮಂತ್ರಣ ನೀಡಲಾಗಿತ್ತು. ಇವರ ಸಮ್ಮುಖದಲ್ಲಿ ಗೌತಮ್ ಬಗಾದಿ ಅವರು ಅಶ್ವತಿ ಅವರಿಗೆ ತಾಳಿ ಕಟ್ಟುವ ಮೂಲಕ ಸಪ್ತಪದಿ ತುಳಿದರು.
ಯಾವುದೇ ಆಡಂಬರವಿಲ್ಲದೇ ಸರಳವಾಗಿ ಮದುವೆಯಾಗಲು ಇಬ್ಬರು ನಿರ್ಧರಿಸಿದ್ದರು. ಆದ್ರೆ, ಕುಟುಂಬಸ್ಥರ ಒತ್ತಾಯದ ಮೇರೆಗೆ ಸ್ನೇಹಿತರು, ಕುಟುಂಬದ ಆಪ್ತರಿಗೆಲ್ಲಾ ಆಹ್ವಾನ ನೀಡಿದ್ದರು. ಯಾವುದೇ ವೈಭೋಗ ಇಲ್ಲದೇ ಸಭಾಂಗಣದಲ್ಲಿ ಮದುವೆ ಸಿಂಪಲ್ ಆಗಿ ನೆರವೇರಿತು.