ದಾವಣಗೆರೆ :ಅವರುಮಕ್ಕಳಿಗೆ ವಿದ್ಯಾದಾನ ಮಾಡುವ ಮುಖೇನ ಪರರ ಮಕ್ಕಳ ಬದುಕನ್ನು ಸುಂದರವಾಗಿಸಿದ ಶಿಕ್ಷಕಿ. ತನ್ನ ಮುದ್ದಿನ ಮಗಳಿಗೆ ಬಿಇ ಓದಿಸಿ ಮದುವೆ ಮಾಡಬೇಕು ಎಂಬ ಕನಸು ಕಟ್ಟಿಕೊಂಡಿದ್ದವರು. ಆ ಅಮ್ಮ- ಮಗಳು ಕಂಡಿದ್ದ ಕನಸುಗಳಿಗೆ ಕ್ಯಾನ್ಸರ್ ಎಂಬ ಮಹಾಮರಿ ಕೊಳ್ಳಿ ಇಟ್ಟಿದೆ.
ದಾವಣಗೆರೆಯ ಶಿಕ್ಷಕಿ ಜಿ ಎನ್ ಕಮಲಮ್ಮ ಅವರ ಪುತ್ರಿ ಕಾವ್ಯ ಹುಟ್ಟತ್ತಲೇ ತಂದೆಯ ಮುಖ ನೋಡದೇ ಬೆಳೆದವರು. ಮತ್ತೊಂದೆಡೆ ಕಾವ್ಯಾಗೆ ಕ್ಯಾನ್ಸರ್ ಎಂಬ ಮಹಾಮಾರಿ ಕಾಡಿತ್ತು. ನಾಲ್ಕು ವರ್ಷ ಆ ಮಹಾಮಾರಿಯೊಂದಿಗೆ ಹೋರಾಡಿದ ಕಾವ್ಯಾ (30) ಅಂತಿಮವಾಗಿ ಮರಣವನ್ನಪ್ಪಿದ್ದರು. ಆದರೆ, ಸಾವಿಗೂ ಮುನ್ನ ಕೆಲ ಬಯಕೆಗಳನ್ನು ವ್ಯಕ್ತಪಡಿಸಿದ್ದರಂತೆ. ಆ ಆಸೆಗಳನ್ನು ಕೊನೆಗೂ ಈಡೇರಿಸಿದ್ದಾರೆ. ಮಗಳ ಸುಂದರ ಮೂರ್ತಿ ನಿರ್ಮಿಸಿ 'ನನ್ನ ಮಗಳು ಜೀವಂತ ಇದ್ದಾಳೆ' ಎಂದು ಭಾವಿಸಿ ಒಂಟಿ ಜೀವನ ಸಾಗಿಸುತ್ತಿದ್ದಾರೆ.
ಹೌದು, ನಗರದ ಸರಸ್ವತಿ ಬಡಾವಣೆಯ ನಿವಾಸಿ, ನಿವೃತ್ತ ಶಿಕ್ಷಕಿ ಜಿ ಎನ್ ಕಮಲಮ್ಮನವರ ಪುತ್ರಿ ಕಾವ್ಯ ಅವರು ಇದ್ದಕ್ಕಿದ್ದಂತೆ ಚಿಕ್ಕ ವಯಸ್ಸಿನಲ್ಲೇ ಕ್ಯಾನ್ಸರ್ಗೆ ತುತ್ತಾದವರು. ಬಿಇ ಪದವಿ ಪಡೆದಿರುವ ಅವರಿಗೆ ಮದುವೆ ಕೂಡ ನಿಶ್ಚಿಯವಾಗಿತ್ತು. ವೈವಾಹಿಕ ಜೀವನಕ್ಕೂ ಕಾಲಿಡಬೇಕಿತ್ತು. ಆದರೆ, ಕ್ಯಾನ್ಸರ್ ಅವರನ್ನು ಮದುವೆಗೂ ಮುನ್ನ ಬಲಿ ಪಡೆದಿತ್ತು.
2019 ರಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ಆರಂಭ ಮಾಡಿದ್ದರು. ಹೀಗೆ ಸತತ ನಾಲ್ಕು ವರ್ಷಗಳ ಕಾಲ ಮಹಾಮಾರಿ ಕ್ಯಾನ್ಸರ್ ಜೊತೆ ಹೋರಾಡಿದ ಕಾವ್ಯ ಊಟ ಮಾಡ್ತಾ ತಾಯಿ ತೊಡೆಮೆಲೆ ಮಲಗಿ ಡಿ,10, 2022 ರಂದು ಕೊನೆಯುಸಿರೆಳೆದಿದ್ದರು. ಸಾವಿಗೂ ಮುನ್ನ ನನ್ನ ಸಮಾಧಿ ಮಾಡಿ ಉದ್ಯಾನ ನಿರ್ಮಿಸಿ, ತನ್ನದೊಂದು ಮೂರ್ತಿ ಮಾಡಿಸುವಂತೆ ಹಾಗೂ ಮೃತದೇಹವನ್ನು ಡೊನೆಟ್ ಮಾಡುವಂತೆ ಕೇಳಿಕೊಂಡಿದ್ದಳು. ಆದರೆ, ದೇಹ ದಾನ ಮಾಡಲು ಆಗಲ್ಲ ಎಂದು ವೈದ್ಯರು ನಿರಾಕರಿಸಿದ್ದರಿಂದ ಕಮಲಮ್ಮನವರು ಗೋಪನಾಳು ಗ್ರಾಮದಲ್ಲಿ 4 ಗುಂಟೆ ಜಮೀನು ಖರೀದಿಸಿ ಶವಸಂಸ್ಕಾರ ಮಾಡಿದ್ದರು. ಮಗಳ ಆಸೆಯಂತೆ ಉದ್ಯಾನ, ಗಿಡಗಳನ್ನು ನೆಟ್ಟು ಸಮಾಧಿ ನಿರ್ಮಿಸಿದ್ದು ಮೇಲೆ ಡೈಮೆಂಡ್ ಶೇಪ್ ಕಮಾನು ಕೂಡ ಕಟ್ಟಿಸಿದ್ದಾರೆ.
ಮಗಳನ್ನು ಉಳಿಸಿಕೊಳ್ಳಲು ಹೋರಾಡಿ ಸೋತ ತಾಯಿ:ಕ್ಯಾನ್ಸರ್ಗೆ ತುತ್ತಾಗಿದ್ದ ತನ್ನ ಒಬ್ಬಳೇ ಮಗಳು ಕಾವ್ಯಳನ್ನು ಉಳಿಸಿಕೊಳ್ಳಲು 4 ವರ್ಷಗಳಲ್ಲಿ ತಾಯಿ ಕಮಲಮ್ಮ ಒಟ್ಟು 40 ಲಕ್ಷ ರೂ. ಖರ್ಚು ಮಾಡಿದ್ದಾರೆ. ಹುಟ್ಟುತ್ತಲೇ ತಂದೆಯನ್ನು ಕಳೆದುಕೊಂಡಿದ್ದ ಕಾವ್ಯಗೆ ಆ ಭಾವನೆ ಕಾಡಬಾರದೆಂಬ ರೀತಿಯಲ್ಲಿ ತಾಯಿ ಕಮಲಮ್ಮರವರೇ ತಂದೆ ಸ್ಥಾನ ತುಂಬಿದ್ದರು. ರಾಣೆಬೆನ್ನೂರಿನ ಇಂಜಿನಿಯರ್ ಕಾಲೇಜಿನಲ್ಲಿ ಬಿಇ ಪದವಿ ಪಡೆದಿದ್ದ ಕಾವ್ಯ ಬಳಿಕ ಬೆಂಗಳೂರಿನಲ್ಲಿ ಎರಡು ವರ್ಷ ಖಾಸಗಿ ಕಂಪನಿಯಲ್ಲಿ ಕೆಲಸ ಸಹ ಮಾಡಿದ್ದರು. ಮೊಬೈಲ್ನಲ್ಲಿ ಬಂದಂತಹ ಮಹಿಳೆಯೊಬ್ಬರ ಮೂರ್ತಿಯ ವಿಡಿಯೋವೊಂದನ್ನು ವೀಕ್ಷಿಸಿ ಈ ರೀತಿಯ ಮೂರ್ತಿ ಮಾಡಿಸುವಂತೆ ಕೇಳಿಕೊಂಡಿದ್ದಳು. ನನ್ನ ಮೂರ್ತಿ ಮನೆಯಲ್ಲಿದ್ದರೆ ನಾನು ನಿಜವಾಗಿಯೂ ಮನೆಯಲ್ಲಿದ್ದೇನೆ ಎಂದುಕೊಂಡು ತಾಯಿ ಜೀವನ ಮಾಡ್ತಾರೆ, ತನ್ನ ಸಾವಿನ ಬಳಿಕ ಕುಗ್ಗುವುದಿಲ್ಲ ಎಂಬ ಭಾವನೆ ನನ್ನ ಪುತ್ರಿಯ ತಲೆಯಲ್ಲಿ ಬಂದಿತ್ತು. ಆದ್ದರಿಂದ ಮೂರ್ತಿ ಮಾಡ್ಸಮ್ಮಾ ಎಂದು ಜೀವ ಹೋಗುವ ಅಂತಿಮ ದಿನಗಳಲ್ಲಿ ಹೇಳಿದ್ದನ್ನು ನೆನೆದು ತಾಯಿ ಕಮಲಮ್ಮ ಕಣ್ಣೀರಿಟ್ಟರು.