ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಶ್ರೀ ಹರಿಬಾಬು ದಾವಣಗೆರೆ:ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಲು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಾಲ್ಕು ತಿಂಗಳ ಹಿಂದೆ ನಡೆದಿದ್ದ ವಿವಾಹಿತ ಮಹಿಳೆ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ತನ್ನ ಪ್ರಿಯಕರನ ಕೈಯಲ್ಲೇ ಕೊಲೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನಿಟ್ಟೂರು ಗ್ರಾಮದ ನಿವಾಸಿ ಕವಿತಾ ಕೊಲೆಯಾದ ಮಹಿಳೆ. ಸಲೀಂ ಮುನ್ನಾ ಖಾನ್ ಕೊಲೆ ಆರೋಪಿ.
ಮೃತ ಮಹಿಳೆ ವಿವಾಹಿತೆಯಾಗಿದ್ದರು ಕೂಡ ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಇದೀಗ ಆತನಿಂದಲೇ ಕೊಲೆಯಾಗಿದ್ದಾರೆ. ಕತ್ತು ಹಿಸುಕಿ ಕೊಲೆ ಮಾಡಿದ ಆರೋಪಿ ಶವವನ್ನು ಸುಟ್ಟು ಹಾಕಿದ್ದಾನೆ ಎಂದು ವಿಜಯನಗರ ಎಸ್ಪಿ ಶ್ರೀ ಹರಿಬಾಬು ಮಾಹಿತಿ ನೀಡಿದ್ದಾರೆ.
ಘಟನೆಯ ಹಿನ್ನೆಲೆ: ಮೃತ ಕವಿತಾಳ ತವರು ಮನೆ ದಾವಣಗೆರೆ ತಾಲೂಕಿನ ಅಲೂರು ಗ್ರಾಮ. ತವರಿಗೆ ತೆರಳಿದ್ದ ಮಹಿಳೆ ಫೆ. 23 ರಂದು ಕಾಣೆಯಾಗಿದ್ದರು. ದಾವಣಗೆರೆ ಜಿಲ್ಲೆಯ ಹರಿಹರಕ್ಕೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದ ಕವಿತಾ ತವರು ಮನೆಗೆ ಹೋಗಿರಲಿಲ್ಲ. ಅತ್ತ ಹರಪನಹಳ್ಳಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿರುವ ಗಂಡನ ಮನೆಗೂ ವಾಪಸ್ ಹೋಗದೇ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಈ ಸಂಬಂಧ ಕುಟುಂಬಸ್ಥರು ಹಲವಾಗಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕತ್ತು ಹಿಸುಕಿ ಹತ್ಯೆ: ಹರಿಹರಕ್ಕೆ ಹೋಗಿ ಬರುವುದಾಗಿ ತಿಳಿಸಿದ್ದ ಕವಿತಾ ಹರಿಹರಕ್ಕೆ ಹೋಗದೇ ಹರಪನಹಳ್ಳಿ ತಾಲೂಕಿನ ತೆಲಗಿ ಗ್ರಾಮಕ್ಕೆ ತೆರಳಿದ್ದರಂತೆ. ಅಲ್ಲಿ ತನ್ನ ಪ್ರಿಯಕರ ಸಲೀಂನ್ನು ಭೇಟಿಯಾಗಿದ್ದರು ಎಂದು ಹೇಳಲಾಗಿದೆ. ಬಳಿಕ ಇಬ್ಬರು ದ್ವಿಚಕ್ರ ವಾಹನದಲ್ಲಿ ಕುಂಚೂರಿ ಕೆರೆಯ ಬಳಿ ನಿರ್ಜನ ಪ್ರದೇಶಕ್ಕೆ ತೆರಳಿದ್ದರಂತೆ. ಈ ವೇಳೆ ಕವಿತಾಳ ಫೋನ್ ಬ್ಯುಸಿ ಬರತ್ತಿದ್ದ ವಿಚಾರಕ್ಕೆ ಸಲೀಂ ಹಾಗೂ ಕವಿತಾಳ ನಡುವೆ ಜಗಳವಾಗಿದೆ. ಜಗಳ ತಾರಕಕ್ಕೇರಿದೆ. ಫೋನ್ ಬ್ಯುಸಿ ಬರುತ್ತದೆ. ನೀನು ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಿಯಾ? ಎಂದು ಸಲೀಂ ಕವಿತಾಳನ್ನು ಪ್ರಶ್ನೆ ಮಾಡಿದ್ದಾನೆ. ಈ ವೇಳೆ ವಾಗ್ವಾದ ನಡೆದು ಸಲೀಂ ಕವಿತಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಶವ ಸುಟ್ಟು ಹಾಕಿದ ದುರುಳ:ಕೊಲೆ ಮಾಡಿರುವ ವಿಚಾರ ಯಾರಿಗೂ ತಿಳಿಬಾರದೆಂದು ಆರೋಪಿ ಸಲೀಂ ಪರಿಚಯಸ್ಥರ ಜಮೀನಿನಲ್ಲಿ ಕವಿತಾಳ ಮೃತದೇಹ ಸುಟ್ಟು ಹಾಕಿದ್ದಾನೆ. ಕೆಲ ದಿನಗಳ ಬಳಿಕ ಶವ ಸುಟ್ಟ ಘಟನೆಯನ್ನು ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಬಳಿಕ ನನ್ನ ಕಾಪಾಡು ಎಂದು ಸ್ನೇಹಿತರಿಗೆ ಆರೋಪಿ ಸಲೀಂ ಅಂಗಾಲಾಚಿ ಬೇಡಿಕೊಂಡಿದ್ದಾನೆ. ಆದರೆ ಆತನ ಸ್ನೇಹಿತರು ತಡಮಾಡದೇ ಈ ಕೊಲೆ ವಿಚಾರವನ್ನು ಕವಿತಾಳ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಪೊಲೀಸರಿಗೆ ವಿಚಾರ ತಿಳಿದ ಬೆನ್ನಲ್ಲೇ ಆರೋಪಿ ಸಲೀಂನನ್ನು ಕರೆತಂದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಎಸ್ ಶ್ರೀ ಹರಿಬಾಬು ಮಾಹಿತಿ ನೀಡಿದರು.
ಇದನ್ನೂ ಓದಿ:Davanagere crime: ಪ್ರಿಯಕರನೊಂದಿಗೆ ಸೇರಿ ಪತಿ ಕಥೆ ಮುಗಿಸಿದ ಪತ್ನಿ.. ಹೆಂಡ್ತಿ ಸೇರಿ ಇಬ್ಬರು ಆರೋಪಿಗಳ ಬಂಧನ