ದಾವಣಗೆರೆ :ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಮತ್ತು ಶಾಸಕ ಶಾಮನೂರು ಶಿವಶಂಕರಪ್ಪ ಅವರ ರಾಜಕೀಯ ಚದುರಂಗದಾಟದಿಂದ ಕೊನೆಗೂ ದಾವಣಗೆರೆಯಲ್ಲಿ ಕಾಂಗ್ರೆಸ್ ಪಕ್ಷ ಮೇಯರ್ ಗಾದಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನಡೆದ ಹೈಡ್ರಾಮದಲ್ಲಿ ಅಂತಿಮವಾಗಿ ಕಾಂಗ್ರೆಸ್ ಚಿಹ್ನೆಯಿಂದ ಗೆದ್ದ 7ನೇ ವಾರ್ಡ್‌ನ ಪಾಲಿಕೆ ಸದಸ್ಯ ವಿನಾಯಕ ಪೈಲ್ವಾನ್ ಅವಿರೋಧವಾಗಿ ಆಯ್ಕೆಯಾದರು. 27ನೇ ವಾರ್ಡ್‌ನ ಪಾಲಿಕೆ ಸದಸ್ಯೆ ಯಶೋಧ ಯಗ್ಗಪ್ಪಾ ಉಪಮೇಯರ್ ಆದರು.
ಪಾಲಿಕೆ ಮೇಯರ್ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಶುಕ್ರವಾರ ರಾತ್ರಿ ಸಭೆ ನಡೆಸಿದ್ದರು. ಈ ನಡುವೆ ತಂತ್ರ ಹೂಡಿದ್ದ ಶಾಮನೂರು ಶಿವಶಂಕರಪ್ಪ ಅವರು ಸವಿತಾ ಹುಲ್ಲುಮನಿ ಹಾಗೂ ವಿನಾಯಕ್ ಪೈಲ್ವಾನ್ ಎಂಬಿಬ್ಬರ ಹೆಸರನ್ನು ಆಯ್ಕೆ ಮಾಡಿದ್ದರು. ಸವಿತಾ ಹುಲ್ಮನಿ ಕ್ಯಾಂಡಿಡೇಟ್ ಎಂದು ಎಲ್ಲೆಡೆ ಸುದ್ದಿ ಹರಡುವಂತೆ ಮಾಡಿದ್ದರು. ಈ ವಿಷಯ ಗೊತ್ತಾಗುತ್ತಿದ್ದಂತೆ ಬಿಜೆಪಿ ವಿನಾಯಕ ಪೈಲ್ವಾನ್‌ಗೆ ಗಾಳ ಹಾಕಲು ಮುಂದಾಯಿತು.
ಮೇಯರ್ ಪಟ್ಟ ಗೆಲ್ಲಲು ವಿನಾಯಕ ಪೈಲ್ವಾನ್ ಅವರನ್ನು ತನ್ನತ್ತ ತೆಳೆಯಲು ಮುಂದಾಗ ಬಿಜೆಪಿ ಅವರನ್ನು ಪಾಲಿಕೆಗೆ ಕರೆತಂದು, ವಿಪ್ ಜಾರಿ ಮಾಡಿದ್ದು. ಆದರೆ ವಿನಾಯಕ ಪೈಲ್ವಾನ್ ವಿಪ್‌ಗೆ ಸಹಿ ಹಾಕಲಿಲ್ಲ. ಅವರು ನೇರವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇವರಿಗೆ ಪಕ್ಷೇತರರು ಸೂಚಕರಾಗಿದ್ದರು. ಸವಿತಾ ಹುಲ್ಲುಮನಿ ನಾಮಪತ್ರ ಸಲ್ಲಿಸಿದ ಬಳಿಕ ವಾಪಸ್ ತೆಗೆದುಕೊಂಡರು. ಇಷ್ಟೆಲ್ಲಾ ಹೈಡ್ರಾಮ ಆದ ಬಳಿಕ ಬಿಜೆಪಿಯಲ್ಲಿ ಕ್ಯಾಂಡಿಡೇಟ್ ಇಲ್ಲದ ಕಾರಣ ಪಕ್ಷದಿಂದ ಯಾರೂ ನಾಮಪತ್ರ ಸಲ್ಲಿಸಲಿಲ್ಲ. ಅಷ್ಟೊತ್ತಿಗೆ ವಿನಾಯಕ್ ಪೈಲ್ವಾನ್ ನಮ್ಮ ಪಕ್ಷದ ಅಭ್ಯರ್ಥಿ ಎಂದು ಬಿಜೆಪಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರು.