ಕರ್ನಾಟಕ

karnataka

ETV Bharat / state

ಪಕ್ಷ ಯಾವುದೇ ಇರಲಿ ಲಿಂಗಾಯತರದ್ದೇ ಪಾರುಪತ್ಯ... ದಾವಣಗೆರೆಯ ಕಂಪ್ಲೀಟ್​​​​ ಡೀಟೇಲ್ಸ್​​​​​​! - ಲಿಂಗಾಯತ

1999 ರ ಬಳಿಕ ಬಿಜೆಪಿಯಿಂದ ಚಿತ್ರದುರ್ಗ ಜಿಲ್ಲೆಯಲ್ಲಿದ್ದ ಜಿ.ಮಲ್ಲಿಕಾರ್ಜುನಪ್ಪರನ್ನು ತಂದು ದಾವಣಗೆರೆ ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಕಣಕ್ಕಿಳಿಸಲಾಗಿತ್ತು. ಈ ವೇಳೆ ಜಿ.ಮಲ್ಲಿಕಾರ್ಜುನಪ್ಪ ಬಿಜೆಪಿಯಿಂದ ಎರಡನೇ ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾದರು. ಅಲ್ಲಿಂದ ಶುರುವಾದ ಬಿಜೆಪಿಯ ಗೆಲುವಿನ ನಾಗಾಲೋಟ ಇಂದಿಗೂ ಮುಂದುವರೆದಿದೆ.

ಬೆಣ್ಣೆನಗರಿಯಲ್ಲಿ ಲೋಕ ಸಮರ

By

Published : Mar 26, 2019, 10:13 PM IST

ದಾವಣಗೆರೆ: ಬೆಣ್ಣೆ ನಗರಿಯಲ್ಲಿ ಲೋಕ ಸಮರದ ಕಾವು ದಿನೇ ದಿನೇ ಬಿಸಿಲಿನ ಝಳ ಹೆಚ್ಚಿದಂತೆ ಏರುತ್ತಿದೆ. ಈ ಜಿಲ್ಲೆಯಲ್ಲಿ ಕಳೆದ ಎರಡು ದಶಕಗಳಿಂದಲೂ ಬಿಜೆಪಿಯದ್ದೇಪಾರುಪತ್ಯ.

ಇಲ್ಲಿ ಹಣಾಹಣಿ ನಡೆದಿರುವುದು ಲಿಂಗಾಯತ ಸಮುದಾಯದ ನಾಯಕರ ನಡುವೆ ಎಂಬುದು ಈ ನೆಲದ ವಿಶೇಷ. ಬಿಜೆಪಿಯಿಂದ ಸಿದ್ದೇಶ್ವರ್ ಕುಟುಂಬವಾದರೆ, ಕಾಂಗ್ರೆಸ್​ನಿಂದಶಾಮನೂರು ಶಿವಶಂಕರಪ್ಪ ಕುಟುಂಬದವರ ನಡುವೆ ಲೋಕಸಭೆ ಚುನಾವಣೆಯಲ್ಲಿ ಬಿಗ್ ಫೈಟ್ ನಡೆದಿದೆ. ಕಳೆದ ನಾಲ್ಕು ಚುನಾವಣೆಗಳಲ್ಲೂ ಬಿಜೆಪಿ ಗೆದ್ದಿದೆ.

ಜಿಲ್ಲೆಯಲ್ಲಿ ಲಿಂಗಾಯತ ಸಮುದಾಯವೇ ನಿರ್ಣಾಯಕ. ಯಾವ ಕಡೆ ಈ ಸಮುದಾಯ ಒಲಿಯುತ್ತದೆಯೋ ಆ ಪಕ್ಷದ ಅಭ್ಯರ್ಥಿ ಗೆದ್ದಿರುವ ಇತಿಹಾಸ ಹೊಂದಿರುವ ಜಿಲ್ಲೆ ಇದು. ಎರಡು ದಶಕಗಳ ರಾಜಕೀಯ ರಣಕಣದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದೆ. ಒಮ್ಮೆ ಮಾತ್ರ ಕಾಂಗ್ರೆಸ್ ಜಯಭೇರಿ ಬಾರಿಸಿದ್ದರೆ, ಉಳಿದ ಚುನಾವಣೆಗಳಲ್ಲಿ ಕಮಲದ್ದೇ ಹವಾ.

ದಾವಣಗೆರೆ ಲೋಕಸಭಾ ರಾಜಕೀಯ ಇತಿಹಾಸ:
1996 ರಲ್ಲಿ ಬಿಜೆಪಿಯು ಎಸ್. ಎ.ರವೀಂದ್ರನಾಥ್​ಗೆ ಟಿಕೆಟ್ ನೀಡದೇ ಮಲ್ಲಿಕಾರ್ಜುನಪ್ಪ ಅವರಿಗೆ ಬಿ ಫಾರಂ ನೀಡಿತ್ತು. ಆಗ ಮೊದಲ ಪ್ರಯತ್ನದಲ್ಲೇ ಕಾಂಗ್ರೆಸ್​ನ ಹುರಿಯಾಳು ಚನ್ನಯ್ಯ ಒಡೆಯರ್​ರನ್ನ ಸೋಲಿಸಿದ್ದರು. 1997ರಲ್ಲಿ ಚಿತ್ರದುರ್ಗ ಜಿಲ್ಲೆಯಿಂದ ದಾವಣಗೆರೆ ಬೇರ್ಪಟ್ಟಿತು. ಆ ಬಳಿಕ ನಡೆದ 1998ರಲ್ಲಿ ಒಂದು ವರ್ಷದ ಅವಧಿವರೆಗಿನ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್​ನಿಂದ ಹುರಿಯಾಳಾಗಿ ಸ್ಪರ್ಧಿಸಿದ್ದ ಶಾಮನೂರು ಶಿವಶಂಕರಪ್ಪ ಗೆಲುವಿನ ನಗೆ ಬೀರಿದ್ದರು. ಈ ಎಲೆಕ್ಷನ್​ನಲ್ಲಿ ಶಾಮನೂರು ಶಿವಶಂಕರಪ್ಪ (3,43,704) ಅವರು ಸಂಸದರಾಗಿದ್ದ ಮಲ್ಲಿಕಾರ್ಜುನಪ್ಪ (3,32,372) ಅವರನ್ನು ಸೋಲಿಸಿದ್ದರು.

ಬಳಿಕ ಒಂದೇ ವರ್ಷದ ನಂತರ ನಡೆದ ಚುನಾವಣೆಯಲ್ಲಿ ಫಲಿತಾಂಶ ಉಲ್ಟಾ ಆಯ್ತು. 1999ರಲ್ಲಿ ನಡೆದ ಎಲೆಕ್ಷನ್​ನಲ್ಲಿ ಕಾಂಗ್ರೆಸ್ ಸೋಲುಂಡರೆ, ಬಿಜೆಪಿ ಜಯಭೇರಿ ಬಾರಿಸಿತು. ಶಾಮನೂರು ಶಿವಶಂಕರಪ್ಪ 3,82,700 ಮತ ಪಡೆದರೆ, ಮಲ್ಲಿಕಾರ್ಜುನಪ್ಪ 3,98,969 ಮತ ಪಡೆದು ವಿಜಯಿಯಾದರು. ಈ ಚುನಾವಣೆ ಬಳಿಕ ಈ ಇಬ್ಬರು ನಾಯಕರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿಲ್ಲ. ಆ ನಂತರ ಶುರುವಾಗಿದ್ದು ಇಬ್ಬರು ನಾಯಕರ ಮಕ್ಕಳ ಹಣಾಹಣಿ. 2004ರಲ್ಲಿ ಬಿಜೆಪಿಯಿಂದ ಮಲ್ಲಿಕಾರ್ಜುನಪ್ಪ ಪುತ್ರ ಜಿ.ಎಂ.ಸಿದ್ದೇಶ್ವರ್ ಮತ್ತು ಕಾಂಗ್ರೆಸ್​ನಿಂದ ಶಾಮನೂರು ಶಿವಶಂಕ್ರಪ್ಪ ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಸ್ಪರ್ಧೆಗಿಳಿದರು. ಈ ಚುನಾವಣೆಯಲ್ಲಿ ಬಿಜೆಪಿಯ ಜಿ.ಎಂ.ಸಿದ್ದೇಶ್ವರ್ 3,70,499 ಮತ ಪಡೆದು ಗೆಲುವಿನ ನಗೆ ಬೀರಿದರೆ, ಮಲ್ಲಿಕಾರ್ಜುನ್ 3,37,823 ಮತ ಪಡೆದು ಸೋಲುಂಡರು. ಇನ್ನು ಜೆಡಿಎಸ್​ನಿಂದ ಕಣಕ್ಕಿಳಿದಿದ್ದ ಮಾಜಿ ಸಂಸದ ಚನ್ನಯ್ಯಒಡೆಯರ್ 1,58,515 ಮತಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಯ್ತು.

2009 ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಸಿದ್ದೇಶ್ವರ್ ಮತ್ತು ಮಲ್ಲಿಕಾರ್ಜುನ್ ನಡುವೆ ಹಣಾಹಣಿ ಏರ್ಪಟ್ಟಿತ್ತು. ಆಗ ಸಿದ್ದೇಶ್ವರ್ 4,23,447 ಮತ ಪಡೆದರೆ, ಮಲ್ಲಿಕಾರ್ಜುನ್ 4,21,423 ಮತ ಪಡೆಯುವ ಮೂಲಕ ತೀವ್ರ ಪೈಪೋಟಿ ನೀಡಿ ವಿರೋಚಿತ ಸೋಲು ಕಂಡಿದ್ದರು. ಇಲ್ಲಿ ಮಲ್ಲಿಕಾರ್ಜುನ್ ಸೋತಿದ್ದು ಕೇವಲ 2024 ಮತಗಳಿಂದ. ಇನ್ನು 2014ರ ಚುನಾವಣೆಯಲ್ಲಿಯೂ ಮಲ್ಲಿಕಾರ್ಜುನ್ ಸೋಲಿನ ರುಚಿ ಕಂಡರು. ಸಿದ್ದೇಶ್ವರ್ 5,18,894 ಮತ ಪಡೆದರೆ, ಮಲ್ಲಿಕಾರ್ಜುನ್ 5,01,287 ಮತ ಪಡೆಯುವ ಮೂಲಕ ಅಲ್ಪ ಮತಗಳಿಂದ ಸೋಲು ಕಂಡರು. ಒಟ್ಟಿನಲ್ಲಿ ಕಳೆದ ನಾಲ್ಕು ಚುನಾವಣೆಯಲ್ಲಿಯೂ ಬಿಜೆಪಿ ಗೆದ್ದು ಬೀಗಿದೆ.

ಕಳೆದ ಮೂರು ಚುನಾವಣೆಗಳ ಬಲಾಬಲ:
- 2004ರಲ್ಲಿ ಬಿಜೆಪಿಯ ಜಿ.ಎಂ.ಸಿದ್ದೇಶ್ವರ್ ಪಡೆದ ಮತ ಶೇ. 40.8. (3,70,499 ಮತಗಳು), ಕಾಂಗ್ರೆಸ್​ನ ಎಸ್.ಎಸ್. ಮಲ್ಲಿಕಾರ್ಜುನ್ ಶೇ. 37.2 ರಷ್ಟು (ಮತಗಳು 3,37,823)

- 2009 ರಲ್ಲಿ ಎರಡನೇ ಬಾರಿ ಮುಖಾಮುಖಿ: ಸಿದ್ದೇಶ್ವರ್ ಶೇ. 46.7 ರಷ್ಟು (ಮತಗಳು 4,23,447), ಮಲ್ಲಿಕಾರ್ಜುನ್ ಶೇ. 46.4 (4,21,423 ಮತಗಳು)

2014ರಲ್ಲಿ ಮೂರನೇ ಮುಖಾಮುಖಿ: ಸಿದ್ದೇಶ್ವರ್ ಶೇ. 46.5 (5,18,894 ಮತಗಳು), ಮಲ್ಲಿಕಾರ್ಜುನ್ ಶೇ. 45 (5,01,287 ಮತಗಳು). ಚಲಾವಣೆಯಾದ ಒಟ್ಟು ಮತಗಳು 11, 14,868.ಅಂದರೆ ಶೇ. 73.2 ರಷ್ಟು ಮತ ಚಲಾವಣೆಯಾಗಿತ್ತು. ಜೆಡಿಎಸ್​​​ನ ಮಹಿಮಾ ಪಟೇಲ್ 46,911 ಮತ ಪಡೆದಿದ್ದರು.

ಅದಕ್ಕಿಂತ ಪೂರ್ವದಲ್ಲಿ ಅಂದರೆ, ದಾವಣಗೆರೆ ಚಿತ್ರದುರ್ಗ ಜಿಲ್ಲೆಯಲ್ಲಿದ್ದಾಗ 1977ರಲ್ಲಿ ಕಾಂಗ್ರೆಸ್​ನ ಕೊಂಡಜ್ಜಿ ಬಸಪ್ಪ ಅವರು ಭಾರತೀಯ ಲೋಕದಳದ ಕೆ.ಜಿ.ಮಹೇಶ್ವರಪ್ಪ ವಿರುದ್ಧ ಜಯ ಸಾಧಿಸಿದ್ದರು. 1980ರ ಚುನಾವಣೆಯಲ್ಲಿ ಕಾಂಗ್ರೆಸ್​​​ನಿಂದ ಸ್ಪರ್ಧಿಸಿದ್ದ ಶಿವಮೊಗ್ಗದ ಟಿ.ವಿ.ಚಂದ್ರಶೇಖರಪ್ಪ ಅವರು ಕೊಂಡಜ್ಜಿ ಬಸಪ್ಪರನ್ನು ಸೋಲಿಸಿದರು. ಕಾಂಗ್ರೆಸ್​​​ನಿಂದ ಸ್ಪರ್ಧಿಸಿದ್ದ ಶಾಮನೂರು ಶಿವಶಂಕರಪ್ಪ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. 1984ರಿಂದ 1991ರ ಮಧ್ಯದ ಅವಧಿಯಲ್ಲಿ ನಡೆದ ಮೂರು ಚುನಾವಣೆಗಳಲ್ಲಿಯೂ ಕುರುಬ ಸಮುದಾಯದ ಪ್ರಬಲ ಮುಖಂಡ ಚನ್ನಯ್ಯ ಒಡೆಯರ್ ಕಾಂಗ್ರೆಸ್​​ನಿಂದ ಮೂರು ಬಾರಿಯೂ ಗೆದ್ದು ಸಂಸತ್​ಗೆ ಆಯ್ಕೆಯಾಗಿದ್ದರು.

1999ರ ಬಳಿಕ ಬಿಜೆಪಿಯಿಂದ ಚಿತ್ರದುರ್ಗ ಜಿಲ್ಲೆಯಲ್ಲಿದ್ದ ಜಿ.ಮಲ್ಲಿಕಾರ್ಜುನಪ್ಪರನ್ನು ತಂದು ದಾವಣಗೆರೆ ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಕಣಕ್ಕಿಳಿಸಲಾಗಿತ್ತು. ಈ ವೇಳೆ ಜಿ.ಮಲ್ಲಿಕಾರ್ಜುನಪ್ಪ ಬಿಜೆಪಿಯಿಂದ ಎರಡನೇ ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾದರು. ಅಲ್ಲಿಂದ ಶುರುವಾದ ಬಿಜೆಪಿಯ ಗೆಲುವಿನ ನಾಗಾಲೋಟ ಇಂದಿಗೂ ಮುಂದುವರಿದಿದೆ.

ಜಿಲ್ಲೆಯಲ್ಲಿ ಮತದಾರರ ಸಂಖ್ಯೆ
ಈ ಬಾರಿ ಜಿಲ್ಲೆಯಲ್ಲಿ ಒಟ್ಟು 16,11,965 ಮತದಾರರಿದ್ದು, ಪುರುಷ 8,14,413, ಮಹಿಳೆ 7,96,874, ಇತರೆ 678 ಮತದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಹದಿನಾರು ಲಕ್ಷಕ್ಕೂ ಹೆಚ್ಚು ಮತದಾರರಿದ್ದು, ಈ ಪೈಕಿ ಪೈಕಿ ಲಿಂಗಾಯತರೇ 4.25 ಲಕ್ಷ ಮತದಾರರಿದ್ದಾರೆ. ಇನ್ನು, 1.34 ಲಕ್ಷ ಕುರುಬರು, ಎಸ್ಸಿ, ಎಸ್ಟಿ ಸೇರಿದಂತೆ ಹಿಂದುಳಿದ ವರ್ಗಗಳ 5.39 ಲಕ್ಷ ಮಂದಿ ಹಕ್ಕು ಚಲಾವಣೆ ಹೊಂದಿದ್ದಾರೆ. ಮುಸ್ಲಿಂರು ಸುಮಾರು ಎರಡು ಲಕ್ಷ, ಬ್ರಾಹ್ಮಣರು 11,218, ಮಡಿವಾಳರು 19770, ಉಪ್ಪಾರ ಜನಾಂಗ 40341, ಮರಾಠ 34488, ಗೊಲ್ಲರು 22252, ವಿಶ್ವಕರ್ಮ 20829, ನೇಕಾರರು 14122, ರೆಡ್ಡಿ 20020, ದೇವಾಂಗ 11408, ಬಾರಿಕೇರರು 29121, ವೈಶ್ಯ 7655, ಸವಿತಾ ಸಮಾಜ 5626, ಇನ್ನುಳಿದ ಸಣ್ಣಪುಟ್ಟ ಜಾತಿಗಳು ಸೇರಿದಂತೆ ಇತರೆ 50 ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ.

ಜಿಲ್ಲೆಯಲ್ಲಿರುವ ಪ್ರಮುಖ ಸಮಸ್ಯೆಗಳು...
ಈ ಭಾಗದಲ್ಲಿ ಇರುವ ಅತಿ ದೊಡ್ಡ ಸಮಸ್ಯೆ ಅಂದರೆ ಉದ್ಯೋಗ ಸೃಷ್ಟಿ ಇಲ್ಲದಿರುವುದು. ಟೆಕ್ಸ್​​ಟೈಲ್​, ಸಕ್ಕರೆ ಕಾರ್ಖಾನೆ ಸೇರಿದಂತೆ ಪ್ರಮುಖ ಇಂಡಸ್ಟ್ರಿಗಳು ನಿಧಾನವಾಗಿ ಮುಚ್ಚಿ ಹೋಗುವಂತಹ ಹಂತ ತಲುಪಿವೆ. ಜಿಲ್ಲೆಯಲ್ಲಿ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಅತಿ ಹೆಚ್ಚು ಕಾರ್ಮಿಕ ವರ್ಗ ಇದೆ. ಆದ್ರೆ, ಕಾರ್ಖಾನೆಗಳು ಇಲ್ಲದಿರುವುದರಿಂದ ಅನೇಕರು ಕೆಲಸ ಸಿಗದೇ ಗುಳೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ.


ಬಿಜೆಪಿಯಲ್ಲಿದ್ದಾರೆ ಆರು ಶಾಸಕರು, ಕಾಂಗ್ರೆಸ್​ನಲ್ಲಿ ಇಬ್ಬರು ಎಂಎಲ್​ಎ:

ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕಡೆ ಬಿಜೆಪಿ ಗೆದ್ದಿದ್ದರೆ, ಎರಡು ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿದೆ. ಇನ್ನು ದಾವಣಗೆರೆ ಜಿಲ್ಲೆಯಲ್ಲಿ ಜಾತಿ ಲೆಕ್ಕಾಚಾರ ನೋಡೋದಾದ್ರೆ ಲಿಂಗಾಯತರೇ ಪ್ರಮುಖ ಪಾತ್ರ ವಹಿಸುತ್ತಾರೆ. ಹಾಗಾಗಿ, ಎರಡೂ ಪಕ್ಷಕ್ಕೂ ಲಿಂಗಾಯತ ಸಮುದಾಯದ ಅಭ್ಯರ್ಥಿಯ ಸ್ಪರ್ಧೆ ಅನಿವಾರ್ಯ ಎಂಬಂತಾಗಿದೆ. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಮತ ವಿಭಜನೆಯಾಗುವ ಸಾಧ್ಯತೆ ಹೆಚ್ಚು. ಅಲ್ಲದೇ, ಇಲ್ಲಿ ಹಿಂದುಳಿದ ಹಾಗೂ ಎಸ್ಸಿ-ಎಸ್ಟಿ ಸಮುದಾಯಗಳು ಕಾಂಗ್ರೆಸ್ ಬೆನ್ನಿಗೆ ನಿಲ್ಲಲಿವೆ. ಆದರೆ, ಬಿಜೆಪಿಗೆ ಮೋದಿ ಹವಾ ಮತ್ತು ಸಿದ್ದೇಶ್ವರ್ ವರ್ಚಸ್ಸು ಸೇರಿದಂತೆ ಬಿಜೆಪಿ ಬಗ್ಗೆ ಇನ್ನಿತರ ಜಾತಿಗಳ ಅಭಿಮಾನ, ಯುವ ಸಮುದಾಯ ಕಮಲದತ್ತ ಹೆಚ್ಚು ಆಕರ್ಷಿತರಾಗುವುದು ವರವಾಗಿ ಪರಿಣಮಿಸಲಿದೆ ಎಂದೇ ವಿಶ್ಲೇಷಿಸಲಾಗುತ್ತದೆ.
.

ABOUT THE AUTHOR

...view details