ಕರ್ನಾಟಕ

karnataka

ETV Bharat / state

ಬೇಲಿಮಲ್ಲೂರಿಗೆ ಕೋಣ ಎಂಬ ತೀರ್ಪು ಕೊಟ್ಟ ಶ್ರೀಗಳು ಹೇಳಿದ್ದೇನು...?

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಹಾಗೂ ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮಗಳ ನಡುವೆ ಏರ್ಪಟ್ಟಿದ್ದ ಸಂಘರ್ಷಕ್ಕೆ ಸ್ವಾಮೀಜಿ ಮತ್ತು ಪೊಲೀಸರ ನೇತೃತ್ವದಲ್ಲಿ ತಿಲಾಂಜಲಿ ಹಾಡಲಾಗಿದೆ.

ಶ್ರೀಗಳು ಹೇಳಿದ್ದೇನು

By

Published : Oct 19, 2019, 3:33 PM IST

ದಾವಣಗೆರೆ : ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಹಾಗೂ ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮಗಳ ನಡುವೆ ಏರ್ಪಟ್ಟಿದ್ದ ಸಂಘರ್ಷಕ್ಕೆ ತಿಲಾಂಜಲಿ ಹಾಡಲಾಗಿದೆ.

ಹೌದು, ಹಿರೇಕಲ್ಮಠದ ಡಾ. ಚನ್ನಮಲ್ಲಿಕಾರ್ಜುನ ಮಹಾಸ್ವಾಮೀಜಿ ಹಾಗೂ ಹೊನ್ನಾಳಿ ಪೊಲೀಸರು ಸೇರಿ ಎರಡು ಗ್ರಾಮಗಳ ನಡುವೆ ಹೆಚ್ಚಾಗುತ್ತಿದ್ದ ವೈಮನಸ್ಸು ಗಮನಿಸಿ ನಿರ್ಣಯವೊಂದಕ್ಕೆ ಬಂದಿದ್ದಾರೆ. ಪೊಲೀಸ್ ಇಲಾಖೆಯು ಶ್ರೀಗಳ ನೇತೃತ್ವದಲ್ಲಿ ಕೋಣ ಯಾರಿಗೆ ಸೇರಬೇಕೆಂಬ ಸಮಸ್ಯೆಗೆ ಮುಕ್ತಿ ಹಾಡಿದ್ದರೂ ಪರಿಸ್ಥಿತಿ ಪೂರ್ತಿ ತಿಳಿಯಾಗಿಲ್ಲ.

ಬೇಲಿಮಲ್ಲೂರಿಗೆ ಕೋಣ ಎಂಬ ತೀರ್ಪು ಕೊಟ್ಟ ಶ್ರೀಗಳು ಹೇಳಿದ್ದೇನು

ಈ ಸಮರ ಇಷ್ಟು ಸುಲಭವಾಗಿ ಬಗೆಹರಿಯಲು ಕಾರಣ ಹೊನ್ನಾಳಿಯಲ್ಲಿರುವ ಹಿರೇಕಲ್ಮಠದ ಚನ್ನಪ್ಪಸ್ವಾಮಿ ಗದ್ದುಗೆ. ಎರಡು ಗ್ರಾಮದ ಜನರು ಚನ್ನಪ್ಪಸ್ವಾಮಿ ಗದ್ದುಗೆ ಬಗ್ಗೆ ಅಪಾರ ಭಕ್ತಿ, ನಂಬಿಕೆ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕೋಣ ಯಾರಿಗೆ ಸೇರಿದ್ದು ಎಂಬ ಬಗ್ಗೆ ಗದ್ದುಗೆಯಲ್ಲಿ ಪ್ರಮಾಣ ಮಾಡುವಂತೆ ಶ್ರೀಗಳು ಹೇಳಿದರು. ಹೊನ್ನಾಳಿ ಸಿಪಿಐ ದೇವರಾಜ್ ಅವರೂ ಸಹ ಈ ವೇಳೆ ಪೊಲೀಸ್ ಇಲಾಖೆಯ ಪರವಾಗಿ ಹಾಜರಿದ್ದರು.

ಒಮ್ಮೆ ಇಲ್ಲಿ ಪ್ರಮಾಣ ಮಾಡಿ ತಪ್ಪು ಎಸಗಿದ್ದರೆ ಜೀವನದಲ್ಲಿ ಎಂದೂ ಕಾಣದಂಥ ಕಹಿ ಘಟನೆ ಅನುಭವಿಸುತ್ತೀರಿ ಎಂಬುದಾಗಿ ಎರಡೂ ಗ್ರಾಮಗಳ ಮುಖಂಡರಿಗೆ ಶ್ರೀಗಳು ಹೇಳಿದರು. ಅದರಂತೆ ಎರಡೂ ಗ್ರಾಮಗಳ ಒಬ್ಬೊಬ್ಬರು ಪ್ರಮಾಣ ಮಾಡಿದರು. ಕೊನೆಗೆ ಬೇಲಿಮಲ್ಲೂರು ಗ್ರಾಮಕ್ಕೆ ಕೋಣ ಬಿಟ್ಟುಕೊಡಬೇಕು ಎಂಬುದಾಗಿ ಶ್ರೀಗಳು ತೀರ್ಪು ಪ್ರಕಟಿಸಿದರು. ಇದಕ್ಕೆ ಎರಡೂ ಗ್ರಾಮಗಳ ಜನರು ಒಪ್ಪಿಕೊಂಡರು.

ಬಳಿಕ ಮಾತನಾಡಿದ ಒಡೆಯರ್ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಯಾರಿಗೂ ಗೆದ್ದೇ ಅಥವಾ ಸೋತೆ ಎಂಬ ಭಾವನೆ ಬರಬಾರದು. ಎರಡು ಗ್ರಾಮಗಳ ಗ್ರಾಮಸ್ಥರು ಸತ್ಯಾಸತ್ಯತೆ ಒಪ್ಪಿಕೊಳ್ಳಬೇಕು. ಆರಾಧ್ಯ ದೈವ ಚನ್ನಪ್ಪಸ್ವಾಮಿ ಗದ್ದುಗೆ ಮೇಲೆ ನಂಬಿಕೆ ಹೊಂದಿರುವ ತಾವು ಆಣೆ ಮಾಡಿ. ಆಣೆ ಮಾಡಿದವರು ತೆಗೆದುಕೊಂಡು ಹೋಗಬಹುದು ಎಂದಿದ್ದೇನೆ. ಇಬ್ಬರೂ ಆಣೆ ಮಾಡಿದ್ದಾರೆ. ಕೊನೆಗೆ ಬೇಲಿಮಲ್ಲೂರಿಗೆ ಕೋಣ ನೀಡಲು ಹಾರನಹಳ್ಳಿ ಗ್ರಾಮಸ್ಥರು ಒಪ್ಪಿದರು. ದೇವರ ಪ್ರೀತಿ, ಒಲುಮೆ ಕಾರ್ಯ. ಶಾಂತಿ ನೆಲೆಸುವ ಸನ್ನಿವೇಶ ಸೃಷ್ಟಿ ಮಾಡುವುದು ಎಲ್ಲರ ಆದ್ಯ ಕರ್ತವ್ಯ ಎಂದು ತಿಳಿ ಹೇಳಿದರು.

ABOUT THE AUTHOR

...view details