ದಾವಣಗೆರೆ :ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸದೇ ಇದ್ದಲ್ಲಿ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುವುದಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ನಗರದಲ್ಲಿ ಇಂದು ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಜಾರಿಗೆ ತರದಿದ್ದರೆ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸುತ್ತೇವೆ. ಇದರಲ್ಲಿ ಬಿಜೆಪಿ ರಾಜ್ಯ ನಾಯಕರು ಭಾಗವಹಿಸುತ್ತಾರೆ. ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ನಂತರ ಪ್ರತಿಭಟನೆ ನಡೆಸಲಾಗುವುದು. ರಾಜ್ಯ ಸರ್ಕಾರ ಕೊಟ್ಟ ಭರವಸೆ ಈಡೇರಿಸುವವರೆಗೂ ನಾವು ಪ್ರತಿಭಟನೆ ಕೈ ಬಿಡುವುದಿಲ್ಲ ಎಂದರು.
ರಾಜ್ಯಾದ್ಯಂತ 7 ತಂಡಗಳ ಪ್ರವಾಸ ಶುರುವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸ ಮುಗಿಸಿ ಇಂದು ದಾವಣಗೆರೆ ಜಿಲ್ಲೆಗೆ ಬಂದಿದ್ದೇನೆ. ಕಾಂಗ್ರೆಸ್ ಸರ್ಕಾರ ಮನೆ ಮನೆಗೆ ಹೋಗಿ 5 ಗ್ಯಾರಂಟಿ ಪತ್ರ ಕೊಟ್ಟು ಬಂದಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ, ಡಿಕೆಶಿ ಸಹಿ ಮಾಡಿದ್ದರು. ಇದನ್ನು ನಂಬಿದ ರಾಜ್ಯದ ಜನರು ಕಾಂಗ್ರೆಸ್ಗೆ ಮತ ಹಾಕಿದರು. ಅದರ ಪರಿಣಾಮ ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಗೆಲುವು ಸಾಧಿಸಿದೆ. ಆದರೆ ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆದರೂ ಅವರು ಕೊಟ್ಟಂತಹ ಯಾವುದೇ ಯೋಜನೆಗಳನ್ನು ಈಡೇರಿಸಿಲ್ಲ. ಹೀಗಾಗಿ ಮುಂದಿನ ತಿಂಗಳು ಪ್ರಾರಂಭವಾಗುವ ಅಧಿವೇಶನದಲ್ಲಿ ಸಂದರ್ಭದಲ್ಲಿ ಪ್ರತಿಭಟನೆ ನಡೆಸುತ್ತೇವೆ.
ಅಧಿವೇಶನದಲ್ಲಿ ಜುಲೈ 4ನೇ ತಾರೀಕು ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. 5ನೇ ತಾರೀಕಿನಿಂದ ರಾಜ್ಯದ ಸರ್ಕಾರ ಘೋಷಣೆ ಮಾಡಿರುವ ಐದು ಘೋಷಣೆಗಳನ್ನು ಯಾವುದೇ ಷರತ್ತುಗಳಿಲ್ಲದೆ ಜಾರಿಗೆ ತರಬೇಕೆಂದು ಒತ್ತಾಯಿಸಿ ನಾನು ಮತ್ತು ಸೋತಂತಹ ಶಾಸಕರು, ಮುಖಂಡರು ವಿಧಾನಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸುತ್ತೇವೆ. ಅಧಿವೇಶನ ಪ್ರಾರಂಭವಾಗಿ ಅಧಿವೇಶನ ಮುಗಿಯೋವರೆಗೂ ಸ್ವತಃ ನಾನೇ ಧರಣಿ ಕುಳಿತುಕೊಳ್ಳುತ್ತೇನೆ. ಸದನದ ಒಳಗೆ ನಮ್ಮ ಚುನಾಯಿತ ಪ್ರತಿನಿಧಿಗಳು ಕಾಂಗ್ರೆಸ್ನ ಕಿವಿ ಹಿಂಡುತ್ತಾರೆ. ಸದನದ ಹೊರಗೆ ನಾವು ಕಾಂಗ್ರೆಸ್ ಕಿವಿ ಹಿಂಡುತ್ತೇವೆ.ಅಧಿವೇಶನ ಮುಗಿಯೋವರೆಗೂ ನಮ್ಮ ಧರಣಿ ನಿಲ್ಲೋದಿಲ್ಲ.
ಕಾಂಗ್ರೆಸ್ ಕೊಟ್ಟ ಭರವಸೆ ಈಡೇರಿಸದೇ ಇದ್ರೆ ಬಿಜೆಪಿ ಸಹಿಸುವುದಿಲ್ಲ. ಕಾಂಗ್ರೆಸ್ ಯೋಗ್ಯತೆಗೆ ಫಸಲ್ ಬಿಮಾ ಹಣವನ್ನೂ ಬಿಡುಗಡೆ ಮಾಡಿಲ್ಲ. ಜನರ ಅಭಿವೃದ್ಧಿ ಮರೆತು ಕಾಂಗ್ರೆಸ್ ದೊಂಬರಾಟ ಮಾಡುತ್ತಿದೆ ಎಂದು ಬಿಎಸ್‌ವೈ ಟೀಕಿಸಿದರು.