ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ದಾವಣಗೆರೆ: ಬಿಜೆಪಿಗೆ ಈ ಬಾರಿ ಚುನಾವಣೆಯಲ್ಲೂ ಕರ್ನಾಟಕದ ಜನ ಆಶೀರ್ವಾದ ಮಾಡಲಿದ್ದು, ಡಬಲ್ ಎಂಜಿನ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಎಂದು ಕೇಂದ್ರ ಸಚಿವ ಹಾಗೂ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಭವಿಷ್ಯ ನುಡಿದರು.
ನಗರದಲ್ಲಿಂದು ಮಹಾಸಂಗಮ ಸಮಾವೇಶದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಮಹಾಸಂಗಮ ಸಮಾವೇಶವೂ ಐತಿಹಾಸಿಕ ಕಾರ್ಯಕ್ರಮ ಆಗಲಿದೆ. ನಗರದಲ್ಲಿ ಮಾರ್ಚ್ 25 ರಂದು ನಡೆಯಲಿರುವ ಬಿಜೆಪಿ ಮಹಾಸಂಗಮ ಸಮಾವೇಶಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ದಾವಣಗೆರೆ ದುರ್ಗಾಂಬಿಕಾ ಜಾತ್ರೆ ತರಹ ಬಿಜೆಪಿ ಮಹಾಸಂಗಮ ಸಮಾವೇಶ ನಡೆಯಬೇಕು. ದಾವಣಗೆರೆ ಮಹಾಸಂಗಮ ಸಮಾವೇಶ ಆಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೆಲ ಸೂಚನೆಗಳನ್ನು ಸಹ ನೀಡಿದ್ದಾರೆ ಎಂದು ತಿಳಿಸಿದರು.
ನಾನು ಬರೀ ಭಾಷಣ ಮಾಡಲು ಬರುವುದಿಲ್ಲ. ದಾವಣಗೆರೆ ಜಿಲ್ಲೆಯ ಜನ ಸಮೂಹದ ನಡುವೆ ಬಂದು ಅವರೊಂದಿಗೆ ಬೆರೆಯಲಿಚ್ಛಿಸುವೆ. ಹೀಗಾಗಿ ಮೋದಿ ಆಗಮನ ಹಿನ್ನೆಲೆ ಸುವ್ಯವಸ್ಥಿತ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ ಎಂದು ಜಿಲ್ಲೆಯ ಕಾರ್ಯಕರ್ತರಿಗೆ ಪ್ರಧಾನ್ ಸಲಹೆ ನೀಡಿದರು.
ದಾವಣಗೆರೆ ಮತ್ತು ಹರಿಹರ ನಗರದ ಪ್ರತಿ ಕುಟುಂಬದ ತಲಾ ಇಬ್ಬರು ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಕರೆದು ತರಬೇಕಾಗಿದೆ. ಆ ಕೆಲಸ ಬಿಜೆಪಿ ಕಾರ್ಯಕರ್ತರದ್ದಾಗಿದೆ. ಹೀಗಾಗಿ ನಿತ್ಯ ಬೈಕ್ ರ್ಯಾಲಿ, ಮನೆ ಮನೆಗೆ ಭೇಟಿ ನೀಡುವ ಮೂಲಕ ಜನರಲ್ಲಿ ಸಮಾವೇಶದ ಅರಿವು ಮೂಡಿಸಬೇಕು. ಸಾಮಾಜಿಕ ಜಾಲ ತಾಣಗಳಲ್ಲಿ ಮಾಹಿತಿ ರವಾನಿಸಬೇಕು ಎಂದು ತಿಳಿಸಿದರು.
ಮುಂದಿನ ಫಲಿತಾಂಶದ ಬಗ್ಗೆ ನಮಗೆಲ್ಲ ಗೊತ್ತಿದೆ: ಪ್ರಧಾನಿ ಮೋದಿ ಅವರು ಪಾಲ್ಗೊಳ್ಳುವ ಬಿಜೆಪಿ ಮಹಾಸಂಗಮ ಸಮಾವೇಶವೂ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ನೆನಪು ಉಳಿಯುವ ಸಮಾವೇಶ ಆಗಲಿದೆ. ಮುಂದಿನ ದಿನಗಳಲ್ಲಿ ಬರುವ ಫಲಿತಾಂಶ ಏನು ಬರುತ್ತದೆ ಎಂಬುದು ನಮಗೆಲ್ಲ ಗೊತ್ತಿದೆ. ಮತ್ತೆ ಬಿಜೆಪಿ ಜಯ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪೂರ್ವ ಸಿದ್ಧತಾ ಸಭೆಯಲ್ಲಿ ರಾಜ್ಯ ಉಸ್ತುವಾರಿ ಅರುಣಸಿಂಗ್ ಮಾತನಾಡಿ, ದಾವಣಗೆರೆಯ ಮಹಾಸಂಗಮ ಸಮಾವೇಶವೂ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಉಳಿಯಲಿದೆ. ಈಗಾಗಲೇ ಬೆಳಗಾವಿ ಹಾಗೂ ಮಂಡ್ಯದಲ್ಲಿ ಲಕ್ಷಾಂತರ ಜನ ಸೇರಿದ್ದರು. ಅದನ್ನು ಮೀರಿಸುವ ರೀತಿ ಜನ ದಾವಣಗೆರೆ ಸಮಾವೇಶಕ್ಕೆ ಸೇರಲಿದ್ದಾರೆ. ಬರುವ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆಲುವು ಸಾಧಿಸುವದರೊಂದಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.
ಕಾಂಗ್ರೆಸ್ ಅಲೆ ಕಾಣ್ತಿಲ್ಲ: ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಕಾಣ್ತಿಲ್ಲ. ರಾಜ್ಯದಲ್ಲಿ ಬಿಜೆಪಿಯ ಪರ ಅಲೆ ಇದೆ. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಆಡಳಿತದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಾಗಿವೆ. ಮೋದಿಯವರು ಕೂಡ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿದ್ದಾರೆ.
ಕಾಂಗ್ರೆಸ್ ಬಳಿ ಯಾವ ಅಸ್ತ್ರಗಳಿಲ್ಲ, ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ, ಡಬಲ್ ಎಂಜಿನ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. 25ಕ್ಕೆ ಪ್ರಧಾನಿ ಆಗಮನ ದಿನ ರೋಡ್ ಶೋ ಇರುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕರ್ತರ ನಡುವಿನಿಂದ ಪ್ರಧಾನಿ ವೇದಿಕೆಗೆ ಬರಲಿದ್ದಾರೆ ಎಂದು ವಿವರಿಸಿದರು.
ರಾಹುಲ್ ಗಾಂಧಿಯಿಂದ ಅವಮಾನ - ಪ್ರಧಾನ್: ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮಾಡಿ, ವಿದೇಶದಲ್ಲಿ ಭಾರತದ ಅಪಮಾನ ಮಾಡಿದ್ದಾರೆ. ಇಡೀ ದೇಶದ ಜನರು ಪ್ರಶ್ನಾತೀತ ನಾಯಕ ನರೇಂದ್ರ ಮೋದಿ ಪರ ಇರುವಾಗ, ಇಂಥ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ದೇಶದ ಬಗ್ಗೆ ಇಲ್ಲದ ಹೇಳಿಕೆ ನೀಡುತ್ತಿರುವುದು ದೇಶಕ್ಕೆ ಅವಮಾನ ಎಂದು ವಾಗ್ದಾಳಿ ನಡೆಸಿದರು.
ಪರಿಶೀಲನೆ: ದಾವಣಗೆರೆ ನಗರದ ಹೊರವಲಯದ ಜಿಎಂಐಟಿ ಕಾಲೇಜ್ ಪಕ್ಕದಲ್ಲಿ ಇರುವ ಮೂನ್ನೂರು ಎಕರೆ ಖಾಲಿ ಜಾಗದಲ್ಲಿ ನಡೆಯಲಿರುವ ಮಹಾಸಂಗಮ ಸಮಾರಂಭದ ಸಿದ್ಧತೆ ಭರದಿಂದ ಸಾಗಿದೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಉಸ್ತುವಾರಿ ಅರುಣ ಸಿಂಗ್ ಸೇರಿದಂತೆ ಪ್ರಮುಖರು ಪೂರ್ವಸಿದ್ಧತಾ ಸ್ಥಳವನ್ನು ಪರಿಶೀಲಿಸಿದರು.
ಇದನ್ನೂಓದಿ:ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಜೋಶಿ ತೀವ್ರ ವಾಗ್ದಾಳಿ..