ದಾವಣಗೆರೆ: ಹರಿಹರ ತಾಲೂಕಿನ ಗುತ್ತೂರು ಗ್ರಾಮದ ಆಟೋ ಚಾಲಕ ಮಂಜುನಾಥ್ ಹಾಗೂ ನೇತ್ರಾವತಿ ದಂಪತಿಯ ಪುತ್ರ ಅಭಿಷೇಕ್ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
ಈ ಕುರಿತಂತೆ ‘ಈಟಿವಿ ಭಾರತ್’ ಜೊತೆ ಸಂತಸ ಹಂಚಿಕೊಂಡಿದ್ದಾರೆ. ನಾನು ನಿತ್ಯವೂ 5 ಕಿಲೋ ಮೀಟರ್ ದೂರ ಸೈಕಲ್ ತುಳಿದು ಶಾಲೆಗೆ ಬರುತ್ತಿದ್ದೆ. ರಾತ್ರಿ ಹೊತ್ತು ಹೆಚ್ಚಾಗಿ ಓದುತ್ತಿದ್ದೆ. ಮನೆಯಲ್ಲಿ ಬಡತನ ಇದ್ದರೂ ವ್ಯಾಸಂಗಕ್ಕೆ ಅಡ್ಡಿ ಆಗಲಿಲ್ಲ. ಸಮಾಜ ವಿಜ್ಞಾನದಲ್ಲಿ ಎರಡು ಅಂಕ ಕಡಿಮೆ ಬಂದದ್ದು ಬೇಸರವಾಯ್ತು. ಆದ್ರೂ 625 ಕ್ಕೆ 623 ಅಂಕ ಬಂದದ್ದು ಖುಷಿಯಾಯ್ತು. ಈ ಫಲಿತಾಂಶ ಖುಷಿ ತಂದಿದೆ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ಎಸ್ಎಸ್ಎಲ್ಸಿ ಟಾಪರ್ ಜೊತೆ ಈಟಿವಿ ಭಾರತ ಸಂದರ್ಶನ ಹರಿಹರ ಪಟ್ಟಣದ ಎಂಕೆಇಟಿ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಎಂ. ಅಭಿಷೇಕ್, ತಾಲೂಕಿನ ಗುತ್ತೂರು ಗ್ರಾಮದ ಆಟೋ ಚಾಲಕ ಮಂಜುನಾಥ್ ಹಾಗೂ ನೇತ್ರಾವತಿ ದಂಪತಿಯ ಪುತ್ರ. ಕನ್ನಡದಲ್ಲಿ 125 ಕ್ಕೆ 125, ಸಮಾಜ ವಿಜ್ಞಾನದಲ್ಲಿ 98 ಅಂಕ ಪಡೆದಿರುವ ಅಭಿಷೇಕ್, ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನದಲ್ಲಿ 100ಕ್ಕೆ 100 ಅಂಕ ಪಡೆಯುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರನಾಗಿದ್ದಾನೆ. ತಾನು ಪಿಯುಸಿಯಲ್ಲಿ ಸೈನ್ಸ್ ತೆಗೆದುಕೊಂಡು ಎಂಜಿನಿಯರ್ ಆಗಬೇಕೆಂಬ ಗುರಿ ಹೊಂದಿದ್ದೇನೆ ಎಂದು ತನ್ನ ಬಯಕೆಯನ್ನು ಹಂಚಿಕೊಂಡಿದ್ದಾನೆ.
ಇನ್ನು ಅಭಿಷೇಕ್ ತಾಯಿ ನೇತ್ರಾವತಿ ಮಂಜುನಾಥ್ ಮಾತನಾಡಿ, ನನ್ನ ಮಗನ ಸಾಧನೆ ಖುಷಿ ತಂದಿದೆ. ಹಗಲಿರುಳು ಕಷ್ಟಪಟ್ಟು ಓದುತ್ತಿದ್ದ. ಮನೆಯಲ್ಲಿ ಬಡತನ ಇದ್ದರೂ ಆತನಿಗೆ ನಾವು ಏನು ಕಡಿಮೆ ಮಾಡಿರಲಿಲ್ಲ. ನನ್ನ ಪತಿಯೂ ಮಗನ ಓದುವಿಕೆಗೆ ಎಲ್ಲಾ ರೀತಿಯ ಸಹಕಾರ ನೀಡಿದರು. ಮಗನ ಸಾಧನೆ ನಮಗಷ್ಟೇ ಅಲ್ಲ, ಶಾಲೆ, ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ ಎಂದರು.
ಶಾಲೆಯ ಪ್ರಾಂಶುಪಾಲ ವಿನೋದ್ ಎಸ್. ಹೆಗಡೆ ಮಾತನಾಡಿ, ಅಭಿಷೇಕ್ ನಮ್ಮ ಶಾಲೆಯ ಶಿಸ್ತಿನ ವಿದ್ಯಾರ್ಥಿ. ಒಂದೇ ಒಂದು ತರಗತಿ ಮಿಸ್ ಮಾಡಿಕೊಂಡಿರಲಿಲ್ಲ. ಚೆನ್ನಾಗಿಯೇ ಓದುತ್ತಿದ್ದ. ಮನೆಯಲ್ಲಿ ಆರ್ಥಿಕ ಸಂಕಷ್ಟ ಇದ್ದರೂ ಉತ್ತಮ ಸಾಧನೆ ಮಾಡಿದ್ದಾನೆ. ಆತನ ಸಾಧನೆ ಶಾಲೆಯ ಶಿಕ್ಷಕ ವರ್ಗ ಸೇರಿದಂತೆ ಎಲ್ಲಾ ಸಿಬ್ಬಂದಿಗೂ ಖುಷಿ ಕೊಟ್ಟಿದೆ. ಭವಿಷ್ಯದಲ್ಲಿ ಆತ ವಿಜ್ಞಾನಿಯಾಗುವ ಮೂಲಕ ದೇಶಕ್ಕೆ ಕೊಡುಗೆ ನೀಡುವಂತಾಗಲಿ ಎಂದು ಹಾರೈಸಿದ್ದಾರೆ.