ಪ್ರಕರಣದ ಬಗ್ಗೆ ಎಸ್ಪಿ ಉಮಾ ಪ್ರಶಾಂತ್ ಮಾಹಿತಿ ದಾವಣಗೆರೆ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಆರೋಪಿಸಿ ಕೆಲ ಯುವಕರ ಗುಂಪೊಂದು ನೈತಿಕ ಪೊಲೀಸ್ಗಿರಿ ನಡೆಸಿ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ದಾವಣಗೆರೆ ನಗರದಲ್ಲಿ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ದೂರು, ಪ್ರತಿದೂರು ದಾಖಲಾಗಿದ್ದು, ಪೊಲೀಸರು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.
ಹಲ್ಲೆಗೊಳಗಾದ ಯುವಕ ಪಕ್ಕದ ಮನೆಯ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ಅವಳ ತಾಯಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಈ ಬಗ್ಗೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇನ್ನೊಂದೆಡೆ, ಬಾಲಕಿ ಡ್ರಾಪ್ ಕೇಳಿದ್ದರಿಂದ ಕರೆದುಕೊಂಡು ಹೊರಟ ವೇಳೆ 10ಕ್ಕು ಹೆಚ್ಚು ಯುವಕರು ಬೈಕ್ ತಡೆದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಯುವಕನ ತಾಯಿ ಹಾಗೂ ಕೆಲ ಸಂಘಟನೆಯವರು ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹಲ್ಲೆಗೊಳಗಾದ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಯುವಕ ಹಾಗೂ ಬಾಲಕಿಯನ್ನು ತಡೆದು ಯುವಕರ ಗುಂಪು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಎಸ್ಪಿ ಪ್ರತಿಕ್ರಿಯೆ: ಈಬಗ್ಗೆ ಎಸ್ಪಿ ಉಮಾ ಪ್ರಶಾಂತ್ ಪ್ರತಿಕ್ರಿಯಿಸಿ, "ಸಂತ್ರಸ್ತೆಯ ತಾಯಿ ಬಂದು ಶನಿವಾರ (ಡಿ.9) ಬಂದು ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ದೂರು ಕೊಟ್ಟಿದ್ದಾರೆ. ಈ ಕುರಿತಂತೆ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲು ಮಾಡಿದ್ದೇವೆ. ಜೊತೆಗೆ, ಇದೇ ಬಾಲಕಿ ಕಡೆಯವರು ಹಲ್ಲೆ ಮಾಡಿದ್ದಾರೆಂದು ಯುವಕ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ. ಈ ಸಂಬಂಧ ಆತ ನೀಡಿದ ದೂರಿನಂತೆ, ಯುವಕನ ಮೇಲೆ ಹಲ್ಲೆ ನಡೆಸಿ ನೈತಿಕ ಪೊಲೀಸ್ಗಿರಿ ಮಾಡಿದವರ ವಿರುದ್ಧ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಹಲ್ಲೆ ಸಂಬಂಧ ಅಟ್ರಾಸಿಟಿ ಪ್ರಕರಣದ ಬಗ್ಗೆ ದಾವಣಗೆರೆ ನಗರ ಡಿಎಸ್ಪಿಗೆ ತನಿಖೆ ನಡೆಸಲು ಸೂಚಿಸಲಾಗಿದೆ'' ಎಂದು ಮಾಹಿತಿ ನೀಡಿದರು.
ಓರ್ವನ ಬಂಧನ:''ಯುವಕನ ಮೇಲೆ ಹಲ್ಲೆ ನಡೆಸಿದವರ ಪೈಕಿ ಒಬ್ಬ ಆರೋಪಿಯನ್ನು ಬಂಧನ ಮಾಡಲಾಗಿದೆ. ಉಳಿದವರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಯುವಕ ತನ್ನ ಜೊತೆ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಬಾಲಕಿ ಹೇಳಿಕೆ ನೀಡಿದ್ದಾಳೆ. ಅಲ್ಲದೇ, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಯುವಕ ಕೂಡ ತನ್ನ ಮೇಲೆ ಕೆಲವರು ಹಲ್ಲೆ ನಡೆಸಿದ ಬಗ್ಗೆ ಹೇಳಿಕೆ ಕೊಟ್ಟಿದ್ದಾನೆ. ಈ ಬಗ್ಗೆ ಎರಡೂ ಪ್ರಕರಣ ಸಂಬಂಧ ಕಾನೂನಿನಂತೆ ತನಿಖೆ ಮುಂದುವರೆದಿದೆ'' ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದರು.
ಇದನ್ನೂ ಓದಿ:ಉಪ್ಪಿನಂಗಡಿ: ವಿದ್ಯಾರ್ಥಿ-ವಿದ್ಯಾರ್ಥಿನಿ ಮೇಲೆ ನೈತಿಕ ಪೊಲೀಸ್ ಗಿರಿ