ಕರ್ನಾಟಕ

karnataka

By

Published : Jun 30, 2023, 8:16 PM IST

ETV Bharat / state

ಬಾಡಿಗೆ ಕಟ್ಟಡದಲ್ಲೇ ಅಂಗನವಾಡಿ ನಡೆಸುತ್ತಿರುವ ಕಾರ್ಯಕರ್ತೆಯರಿಗೆ ಬಾಡಿಗೆ ಕಿರಿಕಿರಿ

ದಾವಣಗೆರೆ ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ನೆಲೆಯೇ ಇಲ್ಲದಂತಾಗಿದೆ.

ಅಂಗನವಾಡಿ ಕೇಂದ್ರ
ಅಂಗನವಾಡಿ ಕೇಂದ್ರ

ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರಗಳು

ದಾವಣಗೆರೆ :ಅಂಗನವಾಡಿ ಕೇಂದ್ರಗಳನ್ನು ನಡೆಸಲು ಸ್ವಂತ ಕಟ್ಟಡಗಳಿಲ್ಲದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೈರಾಣಾಗಿದೆ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಬಾಡಿಗೆ ನೀಡಲು ಕೂಡ ಇಲಾಖೆಯಲ್ಲಿ ಹಣವಿಲ್ಲ ಎಂಬ ಸಬೂಬು ಕೇಳಿ ಬರುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು ಮನೆ ಮಾಲೀಕರಿಂದ ಕಿರಿಕಿರಿಗೆ ತುತ್ತಾಗಿದ್ದಾರೆ. ಕೆಲವು ಅಂಗನವಾಡಿಗಳಿಗೆ ನಿವೇಶನ ಇದ್ರೂ ಕಟ್ಟಡ ಕಟ್ಟಲಾಗದೇ ಇರುವುದು ಅಂಗನವಾಡಿ ಕಾರ್ಯಕರ್ತೆಯರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲೆಯ ಸರ್ಕಾರಿ ಕಟ್ಟಡಗಳಿಲ್ಲದೆ ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಇಂಥ ಕಟ್ಟಡಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬಾಡಿಗೆ ಹಣ ಸಂದಾಯ ಮಾಡಲಾಗುತ್ತಿದೆ. ಕಟ್ಟಡದ ಮಾಲೀಕರಿಗೆ ಸರಿಯಾಗಿ ಬಾಡಿಗೆ ನೀಡದೇ ಇರುವುದರಿಂದ ಕಾರ್ಯಕರ್ತೆಯರು ಮಾಲೀಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನಿವೇಶನದ ಕೊರತೆ ಹಾಗು ಸರ್ಕಾರಿ ಕಟ್ಟಡಗಳಿಲ್ಲದ ಕಾರಣ ಜಿಲ್ಲೆಯ ಒಟ್ಟು 1721 ಅಂಗನವಾಡಿಗಳ ಪೈಕಿ 522 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.‌ ಈ 522 ಅಂಗನವಾಡಿ ಕೇಂದ್ರಗಳ ಬಾಡಿಗೆ ಕಟ್ಟಡದ ಮಾಲೀಕರಿಗೆ ಕಳೆದ 07 ರಿಂದ 08 ತಿಂಗಳಿಂದ ಬಾಡಿಗೆ ಪಾವತಿ ಮಾಡಿಲ್ಲ ಎಂದು ಕಟ್ಟಡದ ಮಾಲೀಕರು ಇಲಾಖೆಗೆ ಹಿಡಿಶಾಪ ಹಾಕ್ತಿದ್ದಾರೆ. ಬಾಡಿಗೆ ನೀಡದೇ ಇರುವ ಇಲಾಖೆಯಿಂದ ಬೇಸತ್ತಿರುವ ಮಾಲೀಕರು ಕಟ್ಟಡದಿಂದ ಕೇಂದ್ರಗಳನ್ನು ಖಾಲಿ ಮಾಡಿಸಲು ಮುಂದಾಗಿದ್ದಾರೆ.

ಸ್ವಂತ ಅಂಗನವಾಡಿ ಕೇಂದ್ರದ ಕಟ್ಟಡ ಇಲ್ಲದೆ ಅಂಗನವಾಡಿ ಕಾರ್ಯಕರ್ತೆಯರು ರೋಸಿ ಹೋಗಿದ್ದಾರೆ. ಬಾಡಿಗೆ ಹೋಗಲಿ, ಕಟ್ಟಡದ ವಿದ್ಯುತ್ ಬಿಲ್ ಅನ್ನು ಇಲಾಖೆ ಸಂದಾಯ ಮಾಡದೆ ಬಾಕಿ ಉಳಿಸಿಕೊಂಡಿದೆ ಎಂದು ಕಾರ್ಯಕರ್ತೆಯರು ಆರೋಪಿಸಿದ್ದಾರೆ.

"ಅಂಗನವಾಡಿಯ ವಿದ್ಯುತ್ ಬಿಲ್ ಕಟ್ಟಿಲ್ಲ, ಬಾಡಿಗೆ ಕೊಡಲು ಇಲಾಖೆ ಬಜೆಟ್ ಬಂದಿಲ್ಲ ಎಂದು ಸಬೂಬು ಹೇಳ್ತಾರೆ. ದಾವಣಗೆರೆ ನಗರದಲ್ಲೇ 140 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಇದಲ್ಲದೆ ಬೇರೆ ಇಲಾಖೆಯ ಸರ್ವೆ ಕೆಲಸಕ್ಕೆ ಅಂಗನವಾಡಿ ಕಾರ್ಯಕರ್ತೆಯರಿಗೆ ನಿಯೋಜನೆ ಮಾಡಲಾಗ್ತಿದೆ. ಅದು ಬದಲಾಗ್ಬೇಕಿದೆ. ತಕ್ಷಣ ನೂತನ ಸರ್ಕಾರ ಈ ಸಮಸ್ಯೆಗಳನ್ನು ಬಗೆಹರಿಸಬೇಕು" ಎಂದು ಅಂಗನವಾಡಿ ಕಾರ್ಯಕರ್ತೆ ರೇಣುಕಮ್ಮ ಒತ್ತಾಯಿಸಿದರು.

ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಜಿಲ್ಲಾ ಅಧ್ಯಕ್ಷೆ ಎಂ.ಬಿ. ಶಾರದಮ್ಮ ಮಾತನಾಡಿ, "ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ವೆ ಕೆಲಸಕ್ಕೆ ನಿಯೋಜನೆ‌ ಮಾಡಲಾಗಿದೆ. ಇದು ಖಂಡನೀಯ. ಸರ್ವೆಗೆ ನಿಯೋಜನೆ‌ ಮಾಡಿರುವುದರಿಂದ ಮಕ್ಕಳಿಗೆ ಸಮಸ್ಯೆ ಆಗ್ತಿದೆ.‌ ಕಟ್ಟಡಗಳಿಗೆ ಬಾಡಿಗೆ ನೀಡದೆ ಸತಾಯಿಸಲಾಗುತ್ತಿದ್ದು, ವಿದ್ಯುತ್ ಬಿಲ್ ಕಟ್ಟದೆ ಇರುವ ಕಾರಣ ಕಟ್ಟಡ ಖಾಲಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ" ಎಂದರು.

ಬಾಡಿಗೆ ಮನೆಯ ಮಾಲೀಕ ಈರಮ್ಮ ಮಾತನಾಡಿ, "ಏಳು ತಿಂಗಳಿಂದ ಬಾಡಿಗೆ ನೀಡಿಲ್ಲ. ಬಾಡಿಗೆ ಕೇಳಿದ್ರೆ ಇವತ್ತು ನಾಳೆ ಎನ್ನುತ್ತಿದ್ದಾರೆ. ಆದ್ದರಿಂದ ಬಜೆಟ್ ಇಲ್ಲದೆ ಬಾಡಿಗೆ ಬರ್ತಿಲ್ಲ. ಅದಕ್ಕೆ ಖಾಲಿ ಮಾಡಿ ಎಂದು ಗಡುವು ನೀಡಲಾಗಿದೆ. ನಮಗೆ ನಾಲ್ಕು ಸಾವಿರ ಬಾಡಿಗೆಯಂತೆ ಏಳು ತಿಂಗಳ ಬಾಡಿಗೆ ಕೊಟ್ಟು ಮನೆ ಖಾಲಿ ಮಾಡಲಿ. ತಿಂಗಳಿಗೆ ಸರಿಯಾಗಿ ಬಾಡಿಗೆ ಸಂದಾಯ ಮಾಡಿದ್ರೆ ಖಾಲಿ ಮಾಡಿಸುವುದಿಲ್ಲ" ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕಿ ವಾಸಂತಿ ಉಪ್ಪಾರ್ ಈಟಿವಿ ಭಾರತ್​ದೊಂದಿಗೆ ದೂರವಾಣಿಯಲ್ಲಿ ಮಾತನಾಡಿ, "ಕೆಲ ತಾಂತ್ರಿಕ ಕಾರಣಗಳಿಂದ ಸಮಸ್ಯೆ ಆಗಿದೆ. ಕೆಲ ತಿಂಗಳಿಂದ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳ ಬಾಡಿಗೆ ಹಣ ಪಾವತಿಸಿಲ್ಲ. ಬಾಡಿಗೆ ಕಟ್ಟಲು ಸರ್ಕಾರಕ್ಕೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸರ್ಕಾರ ಕೂಡ ಬಜೆಟ್ ಒದಗಿಸಬೇಕೆಂದು ಈಗಾಗಲೇ ಆದೇಶ ಮಾಡಿದೆ. ಅನುದಾನ ಬಿಡುಗಡೆಯಾದ ತಕ್ಷಣ ಬಾಡಿಗೆ ಹಣ ಪಾವತಿಸಲಾಗುವುದು" ಎಂದು ಹೇಳಿದರು.

ಇದನ್ನೂ ಓದಿ :ಶಿಥಿಲಾವಸ್ಥೆ ತಲುಪಿದ ಅಂಗನವಾಡಿ ಕಟ್ಟಡ; ಭಯದ ನೆರಳಲ್ಲಿ ಮಕ್ಕಳು

ABOUT THE AUTHOR

...view details