ಕರ್ನಾಟಕ

karnataka

By

Published : Jun 4, 2020, 2:34 PM IST

ETV Bharat / state

ಅಂತರ್ಜಾತಿ ಮದುವೆ ಹಿನ್ನೆಲೆ ಗ್ರಾಮಸ್ಥರಿಂದ ಬಹಿಷ್ಕಾರ: ನೊಂದ ಮಹಿಳೆ ಆರೋಪ

ಅಂತರ್ಜಾತಿ ವಿವಾಹವಾದ ಹಿನ್ನೆಲೆಯಲ್ಲಿ ನಮ್ಮ ಕುಟುಂಬದವರಿಗೆ ಗ್ರಾಮಸ್ಥರು ತೊಂದರೆ ನೀಡುತ್ತಿದ್ದಾರೆ ಎಂದು ಚನ್ನಗಿರಿ ತಾಲೂಕಿನ ವಡ್ನಾಳ್ ಬನ್ನಿಹಟ್ಟಿ ಗ್ರಾಮದ ಗೌರಮ್ಮ ಆರೋಪ ಮಾಡಿದ್ದಾರೆ.

Davangere
ಚನ್ನಗಿರಿ ತಾಲೂಕಿನ ವಡ್ನಾಳ್ ಬನ್ನಿಹಟ್ಟಿ ಗ್ರಾಮದ ಗೌರಮ್ಮ

ದಾವಣಗೆರೆ: ಅಂತರ್ಜಾತಿ ವಿವಾಹವಾದ ಹಿನ್ನೆಲೆಯಲ್ಲಿ ನಮ್ಮ ಕುಟುಂಬದವರಿಗೆ ಗ್ರಾಮಸ್ಥರು ತೊಂದರೆ ನೀಡುತ್ತಿದ್ದಾರೆ. ನಮ್ಮ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದು ಬದುಕಲು ಬಿಡುತ್ತಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಚನ್ನಗಿರಿ ತಾಲೂಕಿನ ವಡ್ನಾಳ್ ಬನ್ನಿಹಟ್ಟಿ ಗ್ರಾಮದ ಗೌರಮ್ಮ ಆರೋಪ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅಳಲು ತೋಡಿಕೊಂಡ ಗೌರಮ್ಮ

ಪತ್ರಿಕಾಗೋಷ್ಠಿಯಲ್ಲಿ ಅಳಲು ತೋಡಿಕೊಂಡ ಅವರು, 19 ವರ್ಷಗಳ ಹಿಂದೆ ಮೇಲ್ವರ್ಗದ ಶಂಕ್ರಪ್ಪ ಎಂಬುವವರ ಜೊತೆ ಅಂತರ್ಜಾತಿ ವಿವಾಹವಾಗಿದ್ದೆ. ಅಂದಿನಿಂದಲೂ ತೊಂದರೆ ಕೊಡ್ತಾನೇ ಇದ್ದು, ತನ್ನ ಪುತ್ರ ಪ್ರದೀಪ್ ಗ್ರಾಮಕ್ಕೆ ಬಂದ ಮೇಲೆ ಇದು ಜಾಸ್ತಿ ಆಗಿದೆ.‌ ನನ್ನ ಮಗ ನೀರು ತರುವುದಕ್ಕೆ ಹೋದಾಗ ಹಲವರು ಹಲ್ಲೆ ನಡೆಸಿದ್ದು, ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಗ್ರಾಮದಲ್ಲಿ ಬದುಕುವುದೇ ಕಷ್ಟ ಆಗಿದೆ ಎಂದು ಅಳಲು ತೋಡಿಕೊಂಡರು.

ಇನ್ನು ದಲಿತ ಸಂಘರ್ಷ ಸಮಿತಿಯ ಸಂಚಾಲಕ ಆರ್. ಪ್ರಕಾಶ್ ಲಗಾಡಿ ಮಾತನಾಡಿ, ಗೌರಮ್ಮರ ಪುತ್ರನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ದೂರು ನೀಡಿದರೆ ಆರೋಪಿಗಳನ್ನು ಬಂಧಿಸಿಲ್ಲ. ಬದಲಾಗಿ ಗೌರಮ್ಮ ಕುಟುಂಬದವರಿಗೆ ಜೋರು ಮಾಡಿದ್ದಾರೆ.‌ ನಾವು ಪ್ರಕರಣ ದಾಖಲಿಸುವಂತೆ ಪಟ್ಟು ಹಿಡಿದ ಮೇಲೆ ದೂರು ಪಡೆದಿದ್ದಾರೆ. ಬಳಿಕ ಸಂತ್ರಸ್ತ ಕುಟುಂಬದ ಮೇಲೆಯೇ ಪ್ರತಿ ದೂರು ದಾಖಲಿಸಿದ್ದಾರೆ ಎಂದರು.

ಇನ್ನು ಈ ಸಂಬಂಧ ಸಿಎಂ, ರಾಜ್ಯಪಾಲರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರು ಸಲ್ಲಿಸಲಾಗುವುದು. ಈ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.‌

ABOUT THE AUTHOR

...view details