ಉಳ್ಳಾಲ(ದಕ್ಷಿಣ ಕನ್ನಡ):ಅಬ್ಬಕ್ಕ ಭವನಕ್ಕೆ ಮೀಸಲಿಟ್ಟ ಜಾಗದ ಸಮೀಪದಲ್ಲೇ ಬ್ಯಾರಿ ಭವನ ನಿರ್ಮಿಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ, ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಉಳ್ಳಾಲ ವೀರರಾಣಿ ಅಬಕ್ಕ ಉತ್ಸವ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯಿಂದ ಪ್ರತಿಭಟನೆಗೆ ನಿರ್ಧಾರ ವೀರರಾಣಿ ಅಬ್ಬಕ್ಕ ಭವನದ ನಿರ್ಮಾಣ ಶೀಘ್ರವಾಗಿ ಆರಂಭವಾಗಬೇಕು. ಅಬ್ಬಕ್ಕ ಭವನಕ್ಕೆ ಮೀಸಲಿಟ್ಟ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿಯ ಜಾಗದ ಸಮೀಪದಲ್ಲೇ ಬ್ಯಾರಿ ಭವನ ನಿರ್ಮಿಸಲು ಮುಂದಾಗಿರುವ ಸರ್ಕಾರದ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು. ಒಂದು ವೇಳೆ, ಇವೆರಡು ಬೇಡಿಕೆ ಈಡೆರದಿದ್ದಲ್ಲಿ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ 2021ರ ಜ.1 ರಂದು 9 ಗಂಟೆಗೆ ಉದ್ದೇಶಿತ ಜಾಗದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಜಯರಾಮ ಶೆಟ್ಟಿ ಹೇಳಿದರು.
ತೊಕ್ಕೊಟ್ಟು ಬಸ್ ನಿಲ್ದಾಣದ ಹಿಂದೆ ಒಟ್ಟು 65 ಸೆಂಟ್ಸ್ ಜಾಗ ಇರಬಹುದು. ಅದರಲ್ಲಿ 45 ಸೆಂಟ್ಸ್ ಅಬ್ಬಕ್ಕ ಭವನಕ್ಕೆ ಮೀಸಲಿಟ್ಟರೆ ಉಳಿದ 25 ಸೆಂಟ್ಸ್ ಗ್ರಾಮಕರಣಿಕರ ವಸತಿ ನಿಲಯಕ್ಕೆ ಮೀಸಲಿಡಲಾಗಿತ್ತು. 9 ವರ್ಷಗಳ ಹಿಂದೆ ಅಬ್ಬಕ್ಕ ಭವನ ನಿರ್ಮಾಣಕ್ಕೆ ರೂ. 5 ಕೋಟಿಯಲ್ಲಿ ನಿರ್ಮಿತಿ ಕೇಂದ್ರಕ್ಕೆ ಗುತ್ತಿಗೆ ನೀಡಲಾಯಿತು. ಅಷ್ಟು ಮೊತ್ತದಲ್ಲಿ ಭವನ ಅಸಾಧ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಲೋಕೋಪಯೋಗಿ ಇಲಾಖೆಗೆ ಜವಾಬ್ದಾರಿ ನೀಡಿತ್ತು. ಅವರಿಂದ ಅಸಾಧ್ಯ ಎಂದಾಗ ಹೌಸಿಂಗ್ ಬೋರ್ಡ್‍ಗೆ ವಹಿಸಿ ಎಂಒಯು ಆಗಿ ಸದ್ಯ 8 ಕೋಟಿ ರೂಪಾಯಿಗಳ ಆಡಳಿತಾತ್ಮಕ ಮಂಜೂರಾತಿ ದೊರೆತಿದ್ದು, ನಾಳೆಯೇ ಹೌಸಿಂಗ್ ಬೋರ್ಡ್ ಕಾಮಗಾರಿ ಆರಂಭಿಸಬಹುದು. ಆದರೆ, ಅವರು ಆಸಕ್ತಿ ವಹಿಸುತ್ತಿಲ್ಲ. ಉಳ್ಳಾಲದ ಸೌಹಾರ್ದತೆಗೆ ಪೂರಕವಾಗಿ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ನಿರ್ಮಾಣವಾಗಿತ್ತು. ಸಮಿತಿಯ ಆಶಯದಂತೆ ಭವನದ ನಿರ್ಮಾಣದ ಮೂಲಕ ಉಳ್ಳಾಲದ ಜನರಿಗೆ ಸೌಹಾರ್ದ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡುವ ಉದ್ದೇಶವಿತ್ತು. ಆದರೆ, ಇದೀಗ ಬ್ಯಾರಿ ಭವನ ಒಟ್ಟೊಟ್ಟಿಗೆ ನಿರ್ಮಿಸಲು ಮುಂದಾಗಿರುವ ಶಾಸಕರ ನಡೆ ಏನು? ಎಂಬುದು ಗೊಂದಲಕಾರಿಯಾಗಿದೆ ಎಂದಿದ್ದಾರೆ.
ಇರುವ 65 ಸೆಂಟ್ಸ್ ಜಾಗದಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣದ ವಿಸ್ತೀರ್ಣ ಕಾಮಗಾರಿಯೂ ನಡೆಯಲಿದೆ ಎಂದು ಶಾಸಕರು ಹೇಳಿಕೆ ನೀಡಿದ್ದಾರೆ. ಆದರೆ, ಎಲ್ಲವನ್ನೂ ಒಂದೇ ಸ್ಥಳದಲ್ಲಿ ನಿರ್ಮಿಸಲು ಕಾರಣವಾದರೂ ಏನು?. ಅಬ್ಬಕ್ಕ ಭವನಕ್ಕೆ ಮೀಸಲಿಟ್ಟ ಪ್ರದೇಶದ ಸಮೀಪ ಇತರ ಕಾಮಗಾರಿಗಳಿಗೆ ಅವಕಾಶ ಕೊಡುವ ಮುನ್ನ ಶಾಸಕರು ಸಮಿತಿಯವರನ್ನು ಕರೆದು ಮಾಹಿತಿಯನ್ನಾದರೂ ಸಂಗ್ರಹಿಸಬಹುದಿತ್ತು ಎಂದು ಹೇಳಿದರು.