ಮಂಗಳೂರು :ನಗರದಲ್ಲಿ ದೇಶವಿರೋಧಿ ಗೋಡೆ ಬರಹವನ್ನು ಬರೆಯಲಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದು ದೇಶ ವಿರೋಧಿ ಕೃತ್ಯಗಳಿಗೆ ಮನ್ನಣೆ ಸಿಗೋದಿಲ್ಲ. ಆದ್ದರಿಂದ ಬರೆದವರನ್ನು ಕೂಡಲೇ ಬಂಧಿಸಿ ಅವರ ಮೇಲೆ ತಕ್ಷಣ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ತಕ್ಷಣ ಅವರನ್ನು ಬಂಧಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಕಠಿಣವಾದ ಕ್ರಮಕೈಗೊಳ್ಳುವ ಮುಖಾಂತರ ಮಂಗಳೂರು ಮಾತ್ರವಲ್ಲದೆ ರಾಜ್ಯದ ಯಾವುದೇ ಮೂಲೆಯಲ್ಲಿಯೂ ಇಂತಹ ಚಟುವಟಿಕೆಗಳನ್ನು ನಮ್ಮ ಸರ್ಕಾರ ನಡೆಸಲು ಬಿಡೋದಿಲ್ಲ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಚಿವ ಸ್ಥಾನದ ಆಕಾಂಕ್ಷೆಗಳ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಟೀಲ್, ನಮ್ಮಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಶಾಸಕರಾದವರು ಸಚಿವ ಸ್ಥಾನದ ಬಗ್ಗೆ ಅಪೇಕ್ಷೆ ಪಟ್ಟಲ್ಲಿ ತಪ್ಪಲ್ಲ.
ರಾಜಕಾರಣದಲ್ಲಿ ಅಪೇಕ್ಷೆ ಹಾಗೂ ಗುರಿ ಇರಬೇಕು. ಆದರೆ, ಸಿಎಂ ಹಾಗೂ ರಾಷ್ಟ್ರೀಯ ನಾಯಕರು ಚರ್ಚೆ ನಡೆಸಿ ಕ್ಯಾಬಿನೆಟ್‌ನಲ್ಲಿ ಯಾರು ಇರಬೇಕೆಂದು ತೀರ್ಮಾನಿಸುತ್ತಾರೆ. ಅದಕ್ಕೆ ನಮ್ಮ ಎಲ್ಲಾ ಶಾಸಕರು ಬದ್ಧರಾಗಿರುತ್ತಾರೆ ಎಂದರು.
ಸಿಎಂ ಬದಲಾವಣೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆದಿಲ್ಲ. ಕಳೆದ 3-4 ತಿಂಗಳಿನಿಂದ ಈ ರೀತಿಯ ಪ್ರಶ್ನೆಗಳು ಬರುತ್ತಿವೆ. ಈ ಬಗ್ಗೆ ಯಾರ ಹಂತದಲ್ಲಿ ಚರ್ಚೆಗಳು ನಡೆದಿವೆ. ಯಾರು ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಎತ್ತಿದ್ದಾರೆ.
ದೆಹಲಿ ಮಟ್ಟದಲ್ಲಿ ಯಾರು ಚರ್ಚೆ ಮಾಡಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರು, ಪಕ್ಷದ ಪದಾಧಿಕಾರಿಗಳು, ಕೋರ್ ಕಮಿಟಿ, ಶಾಸಕರು ಯಾರು ಈ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದು ಸುದ್ದಿಗಾರರಿಗೆ ಪ್ರಶ್ನಿಸಿದರು.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಆಪರೇಷನ್ ಕಮಲ ಆಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಪರೇಷನ್ ಕಮಲದ ಅಗತ್ಯವಿಲ್ಲ. ಈ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 80 ಶೇಕಡಾ ಸ್ಥಾನವನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪಡೆಯುತ್ತಾರೆ ಎಂದರು.