ಮಂಗಳೂರು:ಕರಾವಳಿಯಲ್ಲಿ ದಸರಾ ಅಂದರೆ ನೆನಪಿಗೆ ಬರೋದೇ ಹುಲಿ ವೇಷದ ಮೆರುಗು. ಬ್ಯಾಂಡ್, ತಾಸೆಗಳ ಲಯಬದ್ಧವಾದ ವಾದನಕ್ಕೆ ಬಣ್ಣ ಬಣ್ಣದ ಹುಲಿಗಳ ನರ್ತನ. ಬ್ಯಾಂಡ್, ತಾಸೆಗಳ ಟರ್ರ್ ಟರ್ರ್ ಟರ್ರರ್ರ.... ಟರ್ರರ್ರ... ಎಂಬ ಧ್ವನಿ ಯಾರ ಕಿವಿಗೆ ಬಿದ್ದರೂ ಒಂದು ಸಲ ಕಣ್ಣು ನಿಮಿರಿಸಿ ಹುಲಿ ವೇಷದತ್ತ ನೋಡಿಯೇ ನೋಡುತ್ತಾರೆ. ಅಂತಹ ಆಕರ್ಷಣೆ ಹುಲಿ ವೇಷದಲ್ಲಿದೆ.
ಕರಾವಳಿಯಲ್ಲಿ ಆಧುನಿಕತೆಯ ಎಂತಹ ಗಾಳಿ ಬೀಸಿದರೂ ಇಂದಿಗೂ ಈ ಹುಲಿ ವೇಷದ ಕುಣಿತ ತನ್ನ ಪ್ರಸಿದ್ಧಿಯನ್ನು ಹಾಗೆಯೇ ಉಳಿಸಿಕೊಂಡಿದೆ. ಪಟ್ಟೆ ಹುಲಿ, ಚಿಟ್ಟೆ ಹುಲಿ, ತಾಯಿ ಹುಲಿ, ಶಾರ್ದೂಲ ಹೀಗೆ ವಿವಿಧ ಹುಲಿಗಳ ಬಣ್ಣಗಳನ್ನು ಮೈಮೇಲೆ ಬಳಿದುಕೊಂಡ ಹುಲಿ ವೇಷ ನರ್ತಕರು, ಕುಣಿಯುತ್ತಾ ವಿವಿಧ ಕಡೆಗಳಲ್ಲಿ ಸುತ್ತುತ್ತಾ ಜನರನ್ನು ರಂಜಿಸಿ ತಮ್ಮ ಸಂಭಾವನೆ ಪಡೆಯುತ್ತಾರೆ.