ಕರ್ನಾಟಕ

karnataka

ETV Bharat / state

ಮಂಗಳೂರು: ಆ್ಯಂಬುಲೆನ್ಸ್ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪಿಯ ಬಂಧನ - ಮಂಗಳೂರು ಲೇಟೆಸ್ಟ್ ನ್ಯೂಸ್​

ಮಂಗಳೂರಿನ ರಸ್ತೆಯಲ್ಲಿ ಆ್ಯಂಬುಲೆನ್ಸ್ ವಾಹನದ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ambulance
ಆ್ಯಂಬುಲೆನ್ಸ್​​ಗೆ ಜಾಗ ಬಿಡದೇ ಅಡ್ಡಾದಿಡ್ಡಿ ಕಾರು ಚಾಲನೆ

By

Published : Jul 20, 2021, 2:53 PM IST

ಮಂಗಳೂರು:ರಸ್ತೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿ ಆ್ಯಂಬುಲೆನ್ಸ್ ವಾಹನದ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪಿಯನ್ನು ಮಂಗಳೂರು ಸಂಚಾರ ದಕ್ಷಿಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ವೈರಲ್​ ವಿಡಿಯೋ

ನಗರದ ಉಳ್ಳಾಲ, ಸೋಮೇಶ್ವರ ಗ್ರಾಮದ ಕುಂಪಲ ಬೈಪಾಸ್ 2ನೇ‌ ಅಡ್ಡ ರಸ್ತೆಯ ಚರಣ್ ರಾಜ್ ಎಸ್(31) ಎಂಬಾತ ಬಂಧಿತ ಆರೋಪಿ.
ಚರಣ್‌ರಾಜ್ ದೇರಳಕಟ್ಟೆಯಿಂದ ಪಂಪ್‌ವೆಲ್ ಕಡೆಗೆ ಬರುತ್ತಿದ್ದ ಆ್ಯಂಬುಲೆನ್ಸ್ ಸಂಚಾರಕ್ಕೆ ಅಡ್ಡಿಯಾಗುವಂತೆ ಕಾರನ್ನು‌ ವೇಗವಾಗಿ, ಅಜಾಗರೂಕತೆಯಿಂದ ಬೇಜವಾಬ್ದಾರಿಯುತವಾಗಿ ಚಲಾಯಿಸಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ‌ ಸಾರ್ವಜನಿಕರಿಂದಲೂ ಆಕ್ರೋಶ ವ್ಯಕ್ತವಾಗಿತ್ತು.

ಈ ವಿಡಿಯೋ ಗಮನಿಸಿದ ಮಂಗಳೂರು ಸಂಚಾರ ದಕ್ಷಿಣ ಠಾಣೆಯ ಪೊಲೀಸ್ ಠಾಣಾಧಿಕಾರಿ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 279 ಹಾಗೂ 194(E) ಮೋಟಾರು ವಾಹನ ಕಾಯ್ದೆಯಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದರು. ಬಳಿಕ‌ ಕಾರು ನಂಬರ್‌ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾತನಾಡಿ, ಯಾವುದೇ ತುರ್ತು ವಾಹನಗಳು ಸೈರನ್ ಮಾಡಿಕೊಂಡು ಸಂಚರಿಸುತ್ತಿರುವಾಗ ತೊಂದರೆ ಮಾಡಿದ್ದಲ್ಲಿ 6 ತಿಂಗಳು ಜೈಲು‌ಶಿಕ್ಷೆ ಹಾಗೂ 1 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಈಗಾಗಲೇ ವಾಹನವನ್ನು ಸೀಜ್​​ ಮಾಡಿದ್ದೇವೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದೇವೆ. ವಾಹನದ ಮಾಲಕ ಆರೋಪಿಯ ಸಂಬಂಧಿಕರಾಗಿದ್ದು, ಅವರಿಗೂ ನೋಟಿಸ್ ಜಾರಿ ಮಾಡಿದ್ದೇವೆ ಎಂದು ತಿಳಿಸಿದರು.

ABOUT THE AUTHOR

...view details