ಮಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾನೂನುಗಳ ಸಾಧಕ-ಬಾಧಕಗಳನ್ನು ಜನರ ಮಧ್ಯೆ ಚರ್ಚೆಗಿಡದೆ ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತರುತ್ತಿವೆ. ಇದು ದೇಶದ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತ ವಿರೋಧಿ, ಜನ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಿರುವ ಹಿಂದಿನ ಸರ್ಕಾರಗಳು ಹೇಳ ಹೆಸರಿಲ್ಲದೆ ಬಿದ್ದು ಹೋಗಿವೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೂ ಬಾಳ್ವಿಕೆ ಇಲ್ಲ ಎಂದು ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತ ವಿರೋಧಿ ಕಾನೂನು ಜಾರಿಗೆ ತರುತ್ತಿವೆ. ಆದ್ದರಿಂದ ಗೊತ್ತು ಗುರಿ ಇಲ್ಲದೆ ದಾರಿ ತಪ್ಪಿದ ಈ ಎರಡೂ ಸರ್ಕಾರಗಳ ವಿರುದ್ಧ ಇಂದು ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ರಾಜ್ಯ ಸರ್ಕಾರ ಹಿಂದೆ ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಕಂದಾಯ ತಿದ್ದುಪಡಿ ಕಾಯ್ದೆ ಹಾಗೂ ಕಾರ್ಮಿಕ ಕಾನೂನು ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಎಲ್ಲಾ ಕಾನೂನುಗಳು ವಿಧಾನ ಪರಿಷತ್ನಲ್ಲಿ ಬಿದ್ದು ಹೋಗಿದ್ದರೂ ಮತ್ತೊಮ್ಮೆ ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಮರಾಠರಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಲು ಹೊರಟಿದೆ. ಆದರೆ ಈ ಬಗ್ಗೆ ಜನರಿಗೆ ಮನವರಿಕೆ ಮಾಡುವ ಕೆಲಸವನ್ನು ಮಾಡಿಲ್ಲ. ಇದಲ್ಲದೆ ರಾಜ್ಯ ಸರ್ಕಾರ ಗೋಹತ್ಯೆ ಕಾನೂನು ತಿದ್ದುಪಡಿ ಹಾಗೂ ಲವ್ ಜಿಹಾದ್ ಕಾನೂನನ್ನು ಜಾರಿಗೊಳಿಸಲು ಹೊರಟಿದೆ. ಈ ಕಾನೂನುಗಳನ್ನು ಜಾರಿಗೊಳಿಸಲು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಈ ಕಾನೂನುಗಳಿಂದ ದೇಶ ಆರ್ಥಿಕ ಸ್ವಾವಲಂಬನೆಯಾಗಲಿದೆಯೇ, ಉದ್ಯೋಗ ಸೃಷ್ಟಿಯಾಗುತ್ತದೆಯೇ, ದೇಶ ಉದ್ಧಾರವಾಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ಈ ಕಾನೂನುಗಳನ್ನು ಜಾರಿಗೆ ತರುವಾಗ ಜನರ ಮುಂದೆ ಇಡಲಾಗಿಲ್ಲ. ಆದ್ದರಿಂದ ಯಾವ ಸ್ವರೂಪದ ಕಾನೂನು ಜಾರಿಗೊಳಿಸುತ್ತೀರಿ ಎಂದು ಜನರಿಗೆ ತಿಳಿಸಿ. ಜನರೊಂದಿಗೂ ಇದರ ಸಾಧಕ ಬಾಧಕಗಳನ್ನು ಚರ್ಚೆ ಮಾಡಿ ಎಂದು ಹೇಳಿದರು.