ಪುತ್ತೂರು(ದಕ್ಷಿಣ ಕನ್ನಡ): ಮೌಲ್ಯಯುತ ಮತ್ತು ಕೌಶಲ್ಯಾಧಾರಿತ ಶಿಕ್ಷಣದ ಜೊತೆಗೆ ವಿವಿಧ ಆಯಾಮಗಳಲ್ಲಿ ಆತ್ಮನಿರ್ಭರ ಭಾರತದ ಉದ್ದೇಶವನ್ನು ಸಾಕಾರಗೊಳಿಸುವಲ್ಲಿ ವಿವೇಕಾನಂದ ಮಹಾವಿದ್ಯಾಲಯ ಕಾರ್ಯನಿರ್ವಹಿಸುತ್ತಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಬಹುವಿಷಯಾಧಾರಿತ ಶಿಕ್ಷಣ ನೀಡುತ್ತಿರುವ ವಿದ್ಯಾಸಂಸ್ಥೆ ಪ್ರಸ್ತುತ ಸ್ವಾಯತ್ತತೆಯ ಸ್ಥಾನಮಾನವನ್ನು ಪಡೆದಿದೆ. ಯಾವುದೇ ಸಂಸ್ಥೆ ಸ್ವಾಯತ್ತತೆಯನ್ನು ಪಡೆಯುವುದು ಪ್ರಗತಿಯ ಶುಭಸಂಕೇತ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಂಗಸಂಸ್ಥೆ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಸ್ವಾಯತ್ತತೆಯ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಂಗಳವಾರ ಅವರು ಮಾತನಾಡಿದರು. ನೂತನ ರಾಷ್ಟ್ರೀಯ ಶಿಕ್ಷಣ ನೀತಿ, ವರ್ತಮಾನ ಹಾಗೂ ಭವಿಷ್ಯವನ್ನು ಉಜ್ವಲ ಮತ್ತು ಸುರಕ್ಷಿತಗೊಳಿಸಲಿದೆ. ಪ್ರಪ್ರಥಮವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ ಗರಿಮೆ ಕರ್ನಾಟಕ ರಾಜ್ಯಕ್ಕಿದೆ. ರಾಷ್ಟ್ರದ ಅಖಂಡತೆ, ರಾಷ್ಟ್ರೀಯತೆ ಆಧಾರಿತ ಸಮಾಜದ ದೃಷ್ಟಿಕೋನ, ಮಾತೃಭಾಷೆಯಾಧಾರಿತ ಶಿಕ್ಷಣಕ್ಕೆ ಮಹತ್ವ ನೀಡಲಾಗಿದೆ. ಧರ್ಮ-ಸಂಸ್ಕೃತಿಯ ರಕ್ಷಣೆ, ಸಮಾಜದ ಉದ್ದೇಶಗಳನ್ನು ಶಿಕ್ಷಣದ ಮೂಲಕ ಈಡೇರಿಸುವ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು.
ನಮ್ಮ ದೇಶದ ಭವಿಷ್ಯ ಯುವಕರ ಕೈಯಲ್ಲಿದೆ: ತರುಣರು ತಾವು ಕಂಡ ಗುರಿಯನ್ನು ಸಾಧಿಸುವ ಸಂಕಲ್ಪ ತೊಟ್ಟು, ಕಾರ್ಯಪ್ರವೃತ್ತರಾಗಬೇಕು. ರಾಷ್ಟ್ರದ ನಾಗರಿಕರಾಗಿ ನಾಡಿನ ಸಮಗ್ರ ಏಳಿಗೆಗೆ ನಮ್ಮೆಲ್ಲರ ಯೋಗದಾನ ಅಗತ್ಯ. ದೇಶಭಕ್ತಿಯ ವಾತಾವರಣವನ್ನು ಮನೆಮನೆಯಲ್ಲೂ ನಿರ್ಮಿಸುವ ಮೂಲಕ ಅಸಂಖ್ಯಾತ ಮಹನೀಯರ ಕಾರಣಕ್ಕಾಗಿ ಗಳಿಸಿದ ವಿಶ್ವಗುರು ಸ್ಥಾನವನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹಕಾರ ಕಾರ್ಯವಾಹಕ ಮುಕುಂದ್ ಸಿ.ಆರ್ ಮಾತನಾಡಿ, ಸಮಾಜದ ಅವಶ್ಯಕತೆ ಬದಲಾದಂತೆ ಶಿಕ್ಷಣದ ವ್ಯಾಪ್ತಿಯೂ ವಿಸ್ತಾರಗೊಳ್ಳುತ್ತದೆ. ವಿದ್ಯಾಸಂಸ್ಥೆಯ ಉದ್ದೇಶವನ್ನು ಪರಿಣಾಮಕಾರಿಯಾಗಿ ಮತ್ತು ಪ್ರಖರವಾಗಿ ರಾಷ್ಟ್ರದ ಜನಜೀವನದಲ್ಲಿ ಮೂಡಿಸುವುದಕ್ಕೆ ಸಿಕ್ಕ ಬೃಹತ್ ನೆಗೆತ ಸ್ವಾಯತ್ತತೆ.