ಬೆಳ್ತಂಗಡಿ : ಚಂಡಮಾರುತ ಪರಿಣಾಮವಾಗಿ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಲಾಯಿಲ ಗ್ರಾಮದ ಬಜಕ್ರೆಸಾಲು ಎಂಬಲ್ಲಿ ಹಳ್ಳಕ್ಕೆ ನಿರ್ಮಿಸಿದ್ದ ತಾತ್ಕಾಲಿಕ ಮಣ್ಣಿನ ಸೇತುವೆ ಕೊಚ್ಚಿ ಹೋಗಿದೆ.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಲಾಯಿಲ-ಕನ್ನಾಜೆ-ಕರ್ನೋಡಿ-ಮುಂಡೂರು ಸಂಪರ್ಕ ರಸ್ತೆಯ ಕಾಮಗಾರಿ ನಡೆಯುತ್ತಿದೆ. ಈ ರಸ್ತೆಗೆ ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಜೆಕ್ರೆಸಾಲು ಎಂಬಲ್ಲಿ ಸೇತುವೆ ನಿರ್ಮಾಣ ಮಾಡಲಾಗ್ತಿದೆ. ಈ ಹಿಂದೆ ಇದ್ದ ಹಳೆಯ ಕಿಂಡಿ ಅಣೆಕಟ್ಟನ್ನು ಕೆಡವಿ, ಜನರ ಬೇಡಿಕೆಯಂತೆ ಹೊಸದಾಗಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಹಾಗಾಗಿ, ಜನರ ಸಂಚಾರಕ್ಕೆಂದು ತಾತ್ಕಾಲಿಕ ಮಣ್ಣಿನ ಸೇತುವೆ ಮಾಡಲಾಗಿತ್ತು. ಸೇತುವೆ ಕೊಚ್ಚಿ ಹೋದರೂ, ಕನ್ನಾಜೆ ಸೇರಿದಂತೆ ಈ ಭಾಗದ ಜನರಿಗೆ ಪರ್ಯಾಯ ರಸ್ತೆ ಇರುವ ಕಾರಣ ಸದ್ಯ ಯಾವುದೇ ಸಮಸ್ಯೆ ಆಗಿಲ್ಲ. ಆದರೆ, ಬೆಳ್ತಂಗಡಿ ಪಟ್ಟಣಕ್ಕೆ ಬರಬೇಕಾದರೆ ಸಮಸ್ಯೆ ಎದುರಿಸಬೇಕಾಗಿದೆ.