ಸುಳ್ಯ(ದಕ್ಷಿಣಕನ್ನಡ):ಕರ್ನಾಟಕ - ಕೇರಳ ಗಡಿ ಪ್ರದೇಶದ ಕಾಸರಗೋಡು ಕೊಟ್ಟಿಕುಳಂ ರೈಲು ನಿಲ್ದಾಣದ ಬಳಿ ಹಳಿಯ ಮೇಲೆ ಕಾಂಕ್ರೀಟ್‌ನಲ್ಲಿ ಹುದುಗಿದ್ದ ಕಬ್ಬಿಣದ ಬೀಮ್ ಹಾಕಿದ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮೂಲದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಗುಜರಿ ವಸ್ತುಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ತಮಿಳುನಾಡಿನ ವಿಲ್ಲುಪುರಂ ಮೂಲದ ಪ್ರಸ್ತುತ ಕಾಸರಗೋಡು ಪಳ್ಳಿಕ್ಕರ ಎಂಬಲ್ಲಿ ವಾಸವಿರುವ ಕನಕವಲ್ಲಿ (22) ಎಂಬುವರನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ.
ಕಾಂಕ್ರೀಟ್‌ನಲ್ಲಿ ಹುದುಗಿರುವ ಕಬ್ಬಿಣ ತೆಗೆಯಲು ಹಳಿ ಮೇಲೆ ಬೀಮ್ ತಂದು ಹಾಕಿದ್ದೆ ಎಂದು ಕನಕವಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಮಹಿಳೆಯನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ರೈಲ್ವೆ ಹಳಿಯಲ್ಲಿ ಕಾಂಕ್ರೀಟ್‌ನಲ್ಲಿ ಅಳವಡಿಸಲಾದ ಕಬ್ಬಿಣದ ಬೀಮ್ ಪತ್ತೆಯಾದ ನಂತರದಲ್ಲಿ ರೈಲ್ವೆ ಇಲಾಖೆ ಉನ್ನತ ಅಧಿಕಾರಿಗಳು ಕಾಸರಗೋಡಿಗೆ ಆಗಮಿಸಿದ್ದರು. ಆರ್‌ಪಿಎಫ್, ಸ್ಥಳೀಯ ಪೊಲೀಸರು ಮತ್ತು ಗುಪ್ತಚರ ಇಲಾಖೆಯೂ ಈ ಪ್ರಕರಣದ ತನಿಖೆ ನಡೆಸುತ್ತಿರುವಾಗಲೇ ರೈಲ್ವೆ ಟ್ರ್ಯಾಕ್ ಪಕ್ಕದ ಬಳಿ ಗುಜರಿ ಸಂಗ್ರಹಿಸಿ ಸಂಚರಿಸುತ್ತಿದ್ದ ಮಹಿಳೆಯನ್ನು ವಿಚಾರಿಸಲಾಯಿತು ಎನ್ನಲಾಗ್ತಿದೆ.
ತಾನು ಈ ಕೃತ್ಯ ನಡೆಸಿದ್ದಾಗಿ ಮಹಿಳೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲೂ ಇಂತಹದ್ದೇ ಘಟನೆಗಳು ನಡೆದಿತ್ತು. ಈ ಬಗ್ಗೆಯೂ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಓದಿ:12 ಗಂಟೆಯಲ್ಲಿ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಮುಗಿಸಿ ಸೈ ಎನಿಸಿಕೊಂಡ ರೈಲ್ವೆ ಅಧಿಕಾರಿಗಳು