ಮಂಗಳೂರು :ಸಮುದ್ರಕ್ಕೆ ಎದುರಾಗಿ ಈಜುವುದೇ ಬಹಳ ದುಸ್ತರ. ಹೀಗಿರುವಾಗ ಶಿಕ್ಷಕರೋರ್ವರು ನಗರದ ತಣ್ಣೀರುಬಾವಿ ಬೀಚ್‌ನಲ್ಲಿ ಒಂದು ಕಿ.ಮೀ ದೂರವನ್ನು ಪದ್ಮಾಸನ ಮಂಡಿತನಾಗಿ ಕಾಲಿಗೆ ಸರಪಳಿ ಬಿಗಿದು ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಈಜಿ ಸಾಧನೆ ಮಾಡಿದ್ದಾರೆ.
ಬಂಟ್ವಾಳ ತಾಲೂಕಿನ ಕಲ್ಮಂಜದ ಸ.ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕರಾಗಿರುವ ನಾಗರಾಜ ಖಾರ್ವಿಯವರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ನಿರ್ಮಿಸಲು ಈ ಸಾಧನೆ ಮಾಡಿದ್ದಾರೆ. ಸಮುದ್ರದ ಒಂದು ಕಿ.ಮೀ ದೂರವನ್ನು ಕ್ರಮಿಸಲು ಅವರು 25 ನಿಮಿಷ 16 ಸೆಕೆಂಡುಗಳ ಸಮಯ ತೆಗೆದುಕೊಂಡಿದ್ದಾರೆ. ಬೆಳಗ್ಗೆ 8.55ಕ್ಕೆ ತಣ್ಣೀರುಬಾವಿ ಸಮುದ್ರದಲ್ಲಿ ಈಜಲು ಆರಂಭಿಸಿದ ನಾಗರಾಜ ಖಾರ್ವಿಯವರು 9.20 ಮತ್ತೆ ಮರಳಿ ದಡ ಸೇರಿದ್ದಾರೆ.
ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಕಂಚುಗೋಡಿನವರಾದ ಇವರು ತಮ್ಮ 3ನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಸಮುದ್ರದಲ್ಲಿ ಈಜು ಕಲಿಯಲು ಆರಂಭಿಸಿದ್ದರು. ಈವರೆಗೆ ಅನೇಕ ರಾಷ್ಟ್ರ, ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಪದಕಗಳನ್ನು ಗಳಿಸಿದ್ದಾರೆ.