ಬಂಟ್ವಾಳ (ದ.ಕ.): ದೀಪಾವಳಿಯ ಹಿನ್ನೆಲೆಯಲ್ಲಿ ಮಾರ್ಕೆಟ್ಗಳಲ್ಲಿರುವ ಪರಿಸರಸ್ನೇಹಿ ಹಣತೆಗಳಿಗೆ ಪೂರಕವಾಗಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ವಿದ್ಯಾರ್ಥಿಗಳೇ ಹಣತೆಗಳನ್ನು ನಿರ್ಮಿಸುತ್ತಿದ್ದಾರೆ.
ಶನಿವಾರದೊಳಗೆ ಸುಮಾರು 10 ಸಾವಿರ ಹಣತೆಗಳನ್ನು ನಿರ್ಮಿಸಿ, ಆತ್ಮನಿರ್ಭರ ಭಾರತ ಅಭಿಯಾನ ಸಾಕಾರಗೊಳಿಸುವುದು ಇದರ ಉದ್ದೇಶಗಳಲ್ಲೊಂದು. ವಿಶೇಷವೆಂದರೆ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ವಸುಧಾರಾ ಗೋಶಾಲೆಯಲ್ಲಿರುವ ಸುಮಾರು 40ಕ್ಕೂ ಅಧಿಕ ಗೋವುಗಳ ಸಗಣಿಯಿಂದ (ಗೋಮಯ) ವಿದ್ಯಾರ್ಥಿಗಳು ಪರಿಸರಸ್ನೇಹಿ ಹಣತೆ ತಯಾರಿಸುತ್ತಿದ್ದಾರೆ.
10 ಸಾವಿರ ಗೋಮಯ ಹಣತೆ ತಯಾರಿಸುತ್ತಿರುವ ವಿದ್ಯಾರ್ಥಿಗಳು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸುಮಾರು 3 ಸಾವಿರದಷ್ಟು ವಿದ್ಯಾರ್ಥಿಗಳಿದ್ದಾರೆ. ಶಿಕ್ಷಕರು, ಪೋಷಕರು, ಸಾರ್ವಜನಿಕರ ಸಹಕಾರದಿಂದ ಗೋಮಯ ಹಣತೆ ಹಾಗೂ ಮಣ್ಣಿನ ಹಣತೆಗಳನ್ನೂ ಈ ಮಕ್ಕಳು ತಯಾರಿಸುತ್ತಾರೆ. ಗೋಮಯದ ಪಾಕ ತಯಾರಿಸಿ, ಅಚ್ಚಿನಲ್ಲಿ ಒತ್ತಿ, ಬಿಸಿಲಿನಲ್ಲಿ ಒಣಗಿಸಿಡುವ ಸರಳ ವಿಧಾನವಿದು. ಪದವಿ ವಿಭಾಗದ ಪ್ರಿನ್ಸಿಪಾಲ್ ಕೃಷ್ಣಪ್ರಸಾದ್ ಕಾಯರ್ಕಟ್ಟೆ ನೇತೃತ್ವದಲ್ಲಿ ಹಣತೆಗಳು ತಯಾರಾಗುತ್ತಿವೆ.
ಏನಿದರ ವೈಶಿಷ್ಟ್ಯ:ಈ ಹಣತೆ ತುಂಬಾ ಗಟ್ಟಿಯಾಗಿರುತ್ತದೆ. ಬಿದ್ದರೂ ಅಷ್ಟೊಂದು ಬೇಗನೆ ಒಡೆಯುವುದಿಲ್ಲ. ಸ್ವದೇಶಿ ತಳಿಯ ಗೋವುಗಳ ಗೋಮಯ ಹಣತೆ ತಯಾರಿಕೆಗೆ ಬಳಕೆಯಾಗುತ್ತಿದೆ. ಇದಕ್ಕೆ ಎಣ್ಣೆ ಅಥವಾ ತುಪ್ಪವನ್ನು ಹಾಕಿ ಸುಮಾರು ಅರ್ಧ ಗಂಟೆ ಉರಿಸಿದರೂ ಪರಿಸರಕ್ಕೆ ಒಳ್ಳೆಯದು. ಅಗ್ಗದ ವಿದೇಶಿ ವಸ್ತುಗಳನ್ನು ಖರೀದಿಸಿ, ದೀಪಾವಳಿ ಆಚರಿಸುವ ಬದಲು ಹಣತೆ ನಿರ್ಮಾಣ ಎರಡು ಮುಖ್ಯವಾದ ಲಾಭವನ್ನು ನೀಡುತ್ತದೆ.
ಮೊದಲನೆಯದು ಸ್ವಾವಲಂಬಿಯಾಗಿ ಕೌಶಲಾಭಿವೃದ್ಧಿಯನ್ನು ಹೊಂದುವುದು. ಎರಡನೆಯದು ಪರಿಸರ ಸಂರಕ್ಷಣೆಗೆ ಕೊಡುಗೆ. ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಎಲ್ಲ ಮಕ್ಕಳ ಮನೆಗಳಲ್ಲಿ ಈ ಬಾರಿ ದೀಪಾವಳಿಯಂದು ಈ ಗೋಮಯ ಹಣತೆಗಳು ಬೆಳಗಲಿವೆ. ಇದರೊಂದಿಗೆ ಸುಮಾರು 10 ಸಾವಿರ ಗೋಮಯ ಹಣತೆಗಳು ಆತ್ಮನಿರ್ಭರ ಭಾರತ ನಿರ್ಮಾಣದ ನಿಜಾರ್ಥವನ್ನು ಧ್ವನಿಸಲಿವೆ ಎನ್ನುತ್ತಾರೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್.