ಕರ್ನಾಟಕ

karnataka

ETV Bharat / state

ಕಂಬಳ ಕರೆಯಲ್ಲಿ ಕರಾವಳಿ ಕುವರನ ಹೊಸ ದಾಖಲೆ: ವೇಗದಲ್ಲಿ ಪಾರುಪತ್ಯ ಸಾಧಿಸಿದ ಶ್ರೀನಿವಾಸ್​​ - Kambala srinivas gowda

ವಿಶ್ವವಿಖ್ಯಾತ ಮಿಂಚಿನ ಓಟಗಾರ ಉಸೇನ್ ಬೋಲ್ಟ್ ಅವರು ಟ್ರ್ಯಾಕ್​​ನಲ್ಲಿ 9.58 ಸೆಕೆಂಡ್​​​ಗಳಲ್ಲಿ 100ಮೀ ಓಡಿ ದಾಖಲೆ ಬರೆದಿರುವುದನ್ನು ಶ್ರೀನಿವಾಸಗೌಡ ಕೆಸರು ಗದ್ದೆಯಲ್ಲಿ ಓಡಿ ಮುಗಿಸಿದ್ದರು. ಆ ಬಳಿಕವೂ ಅವರು ದಾಖಲೆ ಮೇಲೆ ದಾಖಲೆಗಳನ್ನು ತಮ್ಮ ಹೆಸರಲ್ಲಿ ಅಚ್ಚೊತ್ತುತ್ತಿದ್ದಾರೆ.

srinivas-gowda-a-kambala-racer-
ಕಂಬಳ ಓಟದಲ್ಲಿ ಶ್ರೀನಿವಾಸ ಗೌಡ

By

Published : Mar 29, 2021, 10:58 PM IST

ಮಂಗಳೂರು (ದ.ಕ): ಕರಾವಳಿ ಕಂಬಳದಲ್ಲಿ ಕಟ್ಟುಮಸ್ತಿನ ದೇಹದ ಶ್ರೀನಿವಾಸ್​ ಗೌಡ ಮತ್ತೆ ಸುದ್ದಿಯಲ್ಲಿದ್ದಾರೆ. ಇವರು ಕಂಬಳ ಗದ್ದೆಯ ಉಸೇನ್ ಬೋಲ್ಟ್ ಅಂತಾನೇ ಫೇಮಸ್. ಕಂಬಳದಲ್ಲಿ ಕೋಣಗಳನ್ನು ಓಡಿಸುವಲ್ಲಿ ಇವರದ್ದು ವಿಶೇಷ ಹೆಸರು. ಹಿಂದೊಮ್ಮೆ ಇವರ ದಾಖಲೆಯ ಓಟ ಕಂಡು ಇಡೀ ದೇಶವೇ ಇವರತ್ತ ನೋಡುವಂತಾಗಿತ್ತು.

ಕಳೆದ 8 ವರ್ಷಗಳಿಂದ ಕಂಬಳ ಓಟಗಾರನಾಗಿ ಶ್ರೀನಿವಾಸ್​ ಗೌಡ ಗುರುತಿಸಿಕೊಂಡರೂ, 2020 ಫೆಬ್ರವರಿ 1ರಂದು ಮಂಗಳೂರಿನ ಐಕಳಬಾವ ಕಾಂತಬಾರೆ-ಬೂದಬಾರೆ ಜೋಡುಕರೆ ಕಂಬಳದಲ್ಲಿ ಮಾಡಿರುವ ಸಾರ್ವಕಾಲಿಕ ದಾಖಲೆ ದೇಶ-ವಿದೇಶಗಳಲ್ಲಿ ಇವ್ರಿಗೆ ಜನಪ್ರಿಯತೆ ತಂದುಕೊಟ್ಟಿದೆ.

ಕಂಬಳ ಕರೆಯಲ್ಲಿ ಕರಾವಳಿ ಯುವಕನ ಹೊಸ ದಾಖಲೆ

ಹಿರಿಯ ವಿಭಾಗದಲ್ಲಿ 142.50 ಮೀಟರ್ ಉದ್ದದ ಕಂಬಳದ ಕೆರೆಯನ್ನು ಇವರು ಕೇವಲ 13.46 ಸೆಕೆಂಡ್​​​​ಗಳಲ್ಲಿ ಗುರಿ ಮುಟ್ಟಿ ದಾಖಲೆ ಬರೆದಿದ್ದರು. ಇದೀಗ ತಮ್ಮದೇ ದಾಖಲೆಯನ್ನು ಮುರಿದು ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ವಾರ ವೇಣೂರಿನಲ್ಲಿ‌ ನಡೆದ ಕಂಬಳದಲ್ಲಿ 8.89 ಸೆಕೆಂಡು​​ಗಳಲ್ಲಿ 100 ಮೀಟರ್​ ಗುರಿ ಮುಟ್ಟಿಸಿದ್ದರೆ, ಮಾರ್ಚ್ 28ರಂದು ಬಂಟ್ವಾಳದ ಕಕ್ಯಪದವು ಸತ್ಯ-ಧರ್ಮ ಜೋಡುಕೆರೆಯ ಕಂಬಳದಲ್ಲಿ 100 ಮೀಟರ್ ಗುರಿಯನ್ನು ಕೇವಲ 8.78 ಸೆಕೆಂಡ್​​​ಗಳಲ್ಲಿ ತಲುಪಿ ಗಮನ ಸೆಳೆದಿದ್ದಾರೆ.

ಇದಿಷ್ಟೇ ಅಲ್ಲ. ಕಂಬಳ ಗದ್ದೆಯಲ್ಲಿ ಹಲವು ದಾಖಲೆ ಬರೆದಿರುವ ಇವರಿಗೆ ಸಿಎಂ ಯಡಿಯೂರಪ್ಪ 3 ಲಕ್ಷ ರೂಪಾಯಿ ನಗದು ಬಹುಮಾನ ನೀಡಿದ್ದರು. ಈ ಬಾರಿಯ 7 ಕಂಬಳಗಳಲ್ಲಿ 18 ಪದಕಗಳನ್ನು ಗೆಲ್ಲುವ ಮೂಲಕ ಅತೀ ಹೆಚ್ಚು ಪದಕ ಪಡೆದ ಕಂಬಳ ಓಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಕಳೆದ ವರ್ಷವೂ 15 ಕಂಬಳಗಳಲ್ಲಿ 46 ಪದಕಗಳನ್ನು ಗೆದ್ದು ಚಾಂಪಿಯನ್‌ ಆಗಿ ಹೊರಹೊಮ್ಮಿದ್ದರು.

ಶ್ರೀನಿವಾಸ ಗೌಡರ ಸಾಧನೆ ಕಂಡು ಮಹಿಂದ್ರಾ ಗ್ರೂಪ್​ನ ಅಧ್ಯಕ್ಷ ಆನಂದ್ ಮಹೀಂದ್ರಾ ಪ್ರಶಂಸೆ ವ್ಯಕ್ತಪಡಿಸಿದ್ದರು. ಇಂತಹ ಪ್ರತಿಭೆಗೆ ಕ್ರೀಡಾಂಗಣದಲ್ಲೂ ಅವಕಾಶ ನೀಡಬೇಕು ಎಂದು ಸಲಹೆ ಕೊಟ್ಟಿದ್ದರು. ಕೇಂದ್ರ ಕ್ರೀಡಾ ಸಚಿವ ಕಿರನ್ ರಿಜಿಜು ತರಬೇತಿ ನೀಡುವುದಾಗಿಯೂ ತಿಳಿಸಿದ್ದರು.

ABOUT THE AUTHOR

...view details