ಮಂಗಳೂರು:ಜಿಂದಾಲ್ ಕಂಪೆನಿಗೆ 3,666 ಎಕರೆ ಭೂಮಿಯನ್ನು ಅಧಿಕೃತವಾಗಿ ಪುಡಿಗಾಸಿಗೆ ಮಾರಾಟ ಮಾಡಲು ಹೊರಟಿರುವ ಸರ್ಕಾರದ ನಿರ್ಧಾರ ಹಿಂದೆ ಭ್ರಷ್ಟಾಚಾರದ ವಾಸನೆ ಇದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಆರೋಪಿಸಿದರು.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಮಾತನಾಡಿದ ಅವರು, ಈಗಿನ ಅಂದಾಜಿನ ಪ್ರಕಾರ 1 ಎಕರೆಗೆ 1.22 ಲಕ್ಷಕ್ಕೆ ಮಾರಾಟ ಮಾಡುವ ಉದ್ದೇಶ ಹೊಂದಿದೆ. ದುರದೃಷ್ಟ ಎಂದರೆ ಜಿಂದಾಲ್ ಕಂಪೆನಿ ಬೇರೆ ಬೇರೆ ಮೂಲಗಳಿಂದ ಕರ್ನಾಟಕ ಸರಕಾರಕ್ಕೆ 1,200 ಕೋಟಿ ರೂ. ಬಾಕಿ ಇಟ್ಟಿದೆ. ಇದನ್ನು ವಸೂಲು ಮಾಡುವ ಆಸಕ್ತಿಯನ್ನು ಸರಕಾರ ತೋರಿಸುತ್ತಿಲ್ಲ. ಅಲ್ಲದೇ ಆ ಭೂಮಿಯನ್ನು ಗಮನಿಸಿದರೆ, ಅದರಲ್ಲಿ ಒಂದಷ್ಟು ಭೂಪ್ರದೇಶ ಎಕರೆಗೆ 2 ಕೋಟಿ ರೂ.ಗೂ ಅಧಿಕ ಬೆಲೆಬಾಳುತ್ತದೆ. ಅಂದಾಜು 5-6 ಸಾವಿರ ಕೋಟಿ ರೂಗೆ ಅಧಿಕ ಬೆಲೆಬಾಳುವ ಭೂಮಿಯನ್ನು ಕೇವಲ 35 ಕೋಟಿ ರೂ.ಗೆ ಮಾರಾಟ ಮಾಡುವುದರ ಹಿಂದಿರುವ ಹುನ್ನಾರವನ್ನು ರಾಜ್ಯ ಸರಕಾರ ಸ್ಪಷ್ಟಪಡಿಸಲಿ ಎಂದು ಹೇಳಿದರು.
ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ಆಳುವ ಪಕ್ಷದ ಹಿರಿಯ ರಾಜಕಾರಣಿ ಎಚ್.ಕೆ.ಪಾಟೀಲ್ ಅವರು ಈ ವ್ಯವಸ್ಥೆಯ ಹಿಂದೆ ಅತ್ಯಂತ ಆತಂಕಕಾರಿ ಬೆಳವಣಿಗೆಗಳು ನಡೆಯುತ್ತಿದೆ. ಹಾಗಾಗಿ ಇದನ್ನು ರದ್ದುಪಡಿಸಬೇಕೆಂದು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದರು. ಆದರೆ ಹಿರಿಯರ ಸಲಹೆಯನ್ನು ಗಣನೆಗೆ ತೆಗೆದುಕೊಳ್ಳದೆ ಸರಕಾರ ಮೊಂಡುತನ ಪ್ರದರ್ಶಿಸುತ್ತಿದೆ. ಆದ್ದರಿಂದ ತಕ್ಷಣ ಈ ಭೂಮಿ ಮಾರಾಟ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದರು.
ರಾಜ್ಯದಲ್ಲಿ 109 ನಗರಾಡಳಿತ ಸಂಸ್ಥೆಗಳಿಗೆ ಚುನಾವಣೆ ಮುಗಿದು 8 ತಿಂಗಳು ಕಳೆದಿದೆ. ಆದರೂ ಅಧ್ಯಕ್ಷ ಉಪಾಧ್ಯಕ್ಷರ ಹುದ್ದೆಗೆ ಚುನಾವಣೆ ನಡೆದಿಲ್ಲ. ಪಂಚಾಯತ್‌ರಾಜ್, ನಗರಾಡಳಿತ ವ್ಯವಸ್ಥೆಯಲ್ಲಿ ರಾಜಕೀಯ ಹಸ್ತಕ್ಷೇಪವೇ ಈ ವಿಳಂಬಕ್ಕೆ ಕಾರಣ ಎಂದರು.ಸರಕಾರ ಮೀಸಲಾತಿ ಪಟ್ಟಿ ಮೊದಲೇ ಪ್ರಕಟ ಮಾಡಿದೆ. ಬಳಿಕ 109 ನಗರಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತದೆ. ಬಳಿಕ ಸರಕಾರ ತನಗೆ ಬೇಕಾದ ಹಾಗೆ ಮೀಸಲಾತಿಯನ್ನು ಬದಲಾವಣೆ ಮಾಡುತ್ತದೆ. ಪರಿಣಾಮ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಈ ನಡುವೆ ನ್ಯಾಯಾಲಯಕ್ಕೆ ಮನವರಿಕೆ ಮಾಡುವಲ್ಲಿ ಸರಕಾರ ಸೋತಿದೆ. 8 ತಿಂಗಳಿಂದ ನಗರ ಸಂಸ್ಥೆಯ ಪುರಸಭೆ, ನಗರಪಾಲಿಕೆ, ಪಟ್ಟಣ ಪಂಚಾಯತ್‌ಗೆ ಅಧ್ಯಕ್ಷ, ಉಪಾಧ್ಯಕ್ಷರೇ ಇಲ್ಲ. ಆದ್ದರಿಂದ ತಕ್ಷಣ ಚುನಾವಣೆ ನಡೆಯಬೇಕಾದ ಅಗತ್ಯ ಇದೆ. ಆದರೆ ಮುಖ್ಯಮಂತ್ರಿ ತಮ್ಮ ಕುರ್ಚಿ ಉಳಿಸಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದಾರೆ ಎಂದು ಆರೋಪಿಸಿದರು.