ಪುತ್ತೂರು: ಮೂಲ ಸೌಕರ್ಯಗಳಲ್ಲಿ ನೀರು, ವಸತಿ, ವಿದ್ಯುತ್ ಜೊತೆಗೆ ರಸ್ತೆಯೂ ಪ್ರಮುಖವಾದದ್ದು. ಆದ್ರೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮ ಪಂಚಾಯತಿಗೊಳಪಟ್ಟ ಅಡ್ಯಾಲು ನಿವಾಸಿಗಳಿಗೆ ಮಾತ್ರ ರಸ್ತೆ ಸಮಸ್ಯೆ ತಪ್ಪಿಲ್ಲ.
ಅಡ್ಯಾಲುವಿನಲ್ಲಿ ಸುಮಾರು 10 ಮನೆಗಳಿದ್ದು, ಈ ಮನೆಗಳಿಗೆ ಸರಿಯಾದ ರಸ್ತೆ ವ್ಯವಸ್ಥೆಗಳಿಲ್ಲ. ಪುತ್ತೂರು ಕಬಕ ರಸ್ತೆಯ ಕವಲು ದಾರಿಯಾದ ಅಡ್ಯಾಲು-ಕುಳ ರಸ್ತೆಯು 1 ಕಿ.ಮೀ. ಉದ್ದವಿದ್ದು, ಈ ರಸ್ತೆಯಲ್ಲಿ ಕೊನೆಯ 200 ಮೀ.ನಷ್ಟು ವ್ಯಾಪ್ತಿಯಲ್ಲಿ ರಸ್ತೆಯಿಲ್ಲದೆ ಕಾಲು ದಾರಿಯಾಗಿ ಮಾರ್ಪಟ್ಟಿದೆ. ಇಲ್ಲಿ ಯೋಗ್ಯ ರಸ್ತೆ ನಿರ್ಮಾಣ ಮಾಡುವಂತೆ ಕಳೆದ 50 ವರ್ಷಗಳಿಂದಲೂ ಇಲ್ಲಿನ ಜನರು ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದು, ಯಾವುದೇ ಪ್ರಯೋಜನವಾಗಿಲ್ಲ. ನಮಗೆ ರಸ್ತೆ ವ್ಯವಸ್ಥೆ ಕಲ್ಪಿಸಿ ಎಂದು ಇಲ್ಲಿನ ಜನರು ಪ್ರಧಾನಮಂತ್ರಿ, ಮುಖ್ಯಮಂತ್ರಿಗೂ ಮನವಿ ಮಾಡಿದ್ದಾರೆ. ಈ ಮನವಿಗೆ ಸ್ಪಂದಿಸಿದ ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ಪರಿಶೀಲನೆ ನಡೆಸಿ ರಸ್ತೆ ನಿರ್ಮಿಸಿಕೊಡುವಂತೆ ಗ್ರಾಮ ಪಂಚಾಯತ್‌ಗೆ ಸೂಚನೆ ನೀಡಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ.
ಅಡ್ಯಾಲು-ಕುಳ ಪ್ರದೇಶದ ರಸ್ತೆ ಸಮಸ್ಯೆ ಅಲ್ಲದೆ ಈ ಹಿಂದಿನ ಶಾಸಕರು ಹಾಗೂ ಈಗಿನ ಶಾಸಕರಿಗೂ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿ, ತಹಶೀಲ್ದಾರ್‌ಗೂ ನೀಡಿದ ಮನವಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಇಡ್ಕಿದು ಪಂಚಾಯತ್‌ಗೆ ನೀಡಿದ ಮನವಿಗಂತೂ ಲೆಕ್ಕವೇ ಇಲ್ಲ ಎನ್ನುತ್ತಾರೆ ಸ್ಥಳೀಯರು. ನಮಗೆ ರಸ್ತೆ ಮಾಡಿ ಕೊಡದಿದ್ದಲ್ಲಿ ನಾವು ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ಅಡ್ಯಾಲು ಕುಳದ ಎಲ್ಲಾ ಮತದಾರರೂ ಈ ಬಾರಿಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದರು. ಈ ಬಗ್ಗೆ ಬ್ಯಾನರ್ ಹಾಕಿ ಎಚ್ಚರಿಸುವ ಕೆಲಸವನ್ನು ಮಾಡಿದ್ದರು. ಆದರೆ ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಆಗಿನ ಉಪ ವಿಭಾಗಾಧಿಕಾರಿಗಳು ರಸ್ತೆ ನಿರ್ಮಾಣದ ಮೌಖಿಕ ಭರವಸೆ ನೀಡಿ ಮತದಾನ ಬಹಿಷ್ಕಾರವನ್ನು ಹಿಂತೆಗೆದುಕೊಳ್ಳುವಂತೆ ಮನವೊಲಿಸಿದ್ದರು. ಅವರ ಭರವಸೆಯ ಮೇರೆಗೆ ಚುನಾವಣಾ ಬಹಿಷ್ಕಾರದಿಂದ ಜನರು ಹಿಂದೆ ಸರಿದಿದ್ದರು. ಆದರೆ ವಿಧಾನಸಭೆ ಚುನಾವಣೆ ಕಳೆದು ವರ್ಷಗಳೇ ಕಳೆದರೂ ಈ ತನಕ ಇವರ ಬಳಿಗೆ ಬಂದವರಿಲ್ಲ. ಇವರ ಸಮಸ್ಯೆಯನ್ನು ಕೇಳಿದವರಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ.
ನಮಗೆ ರಸ್ತೆ ಯಾವತ್ತೋ ಆಗಬೇಕಿತ್ತು. ಆದರೆ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳಿಂದಾಗಿ ನಮ್ಮ ಬೇಡಿಕೆಗೆ ಬೆಲೆ ಸಿಕ್ಕಿಲ್ಲ. ಅಡ್ಯಾಲು-ಕುಳದಲ್ಲಿ ಎಂಡೋಸಲ್ಫಾನ್ ಪೀಡಿತರು, ವಿಕಲಚೇತನರು, ಬುದ್ಧಿಮಾಂದ್ಯರು, ವೃದ್ಧರು, ಶಾಲಾ ಮಕ್ಕಳು ಹೀಗೆ ಅನಾರೋಗ್ಯಪೀಡಿತ ಜನರಿದ್ದು, ಮಕ್ಕಳಿಗೆ ಶಾಲೆಗೆ ಹೋಗಲು, ಅನಾರೋಗ್ಯ ಆದಾಗ ಆಸ್ಪತ್ರೆಗೆ ಹೋಗಲು ಪರದಾಡಬೇಕಾಗಿದೆ. ಕಟ್ಟಡ ನಿರ್ಮಾಣದ ಅಗತ್ಯ ಸಾಮಾಗ್ರಿಗಳನ್ನು ಸಾಗಿಸಲು ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಮನೆ, ಇನ್ನಿತರೆ ಕಟ್ಟಡ ನಿರ್ಮಾಣವಂತೂ ದೂರದ ಮಾತಾಗಿದೆ.
ಇಲ್ಲಿನ 2 ಮನೆಗಳು ಕುಸಿಯುವ ಸ್ಥಿತಿಯಲ್ಲಿದೆ. ಒಂದು ಮನೆಯವರು ಕಷ್ಟದಲ್ಲಿ ಮನೆ ನಿರ್ಮಿಸಲು ಮುಂದಾಗಿದ್ದರೂ ಕಳೆದ 3 ವರ್ಷಗಳಿಂದ ಕಾಮಗಾರಿ ಅರ್ಧಕ್ಕೆ ಬಾಕಿಯಾಗಿದೆ. ನಾವು ಇಷ್ಟೆಲ್ಲಾ ಅರ್ಜಿ, ಮನವಿ ಸಲ್ಲಿಸಿದ್ದರೂ ನಮ್ಮ ರಸ್ತೆ ಬೇಡಿಕೆ ಈಡೇರಿಲ್ಲ. ನಮ್ಮ ಬೇಡಿಕೆಗೆ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಈ ಹಿಂದೆಯೂ ಬೆಂಬಲ ನೀಡಿದೆ. ಇದೀಗ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಸಹಕಾರ ಪಡೆದು ಬಂಟ್ವಾಳ ತಾಲೂಕು ಕಚೇರಿ ಮುಂಭಾಗದಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.