ದಕ್ಷಿಣ ಕನ್ನಡ(ಪುತ್ತೂರು): ಇಲ್ಲಿನ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಕುಡಿಯುವ ನೀರು ಮತ್ತು ಕೊರೊನಾ ಮುಂಜಾಗ್ರತೆ ವಿಚಾರವಾಗಿ ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ಸಭೆ ಏರ್ಪಡಿಸಲಾಗಿತ್ತು.
ಸಭೆಯಲ್ಲಿ ತಾಲೂಕಿನ 41 ಗ್ರಾಪಂಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಟಾಸ್ಕ್ ಫೋರ್ಸ್ ವತಿಯಿಂದ ಹೊಸ ಸಾರ್ವಜನಿಕ ಕೊಳವೆ ಬಾವಿ ತೆರೆಯುವಂತೆ ಅಭಿವೃದ್ಧಿ ಅಧಿಕಾರಿಗಳಿಂದ ಆಗ್ರಹ ವ್ಯಕ್ತವಾಯತು.
ಪುತ್ತೂರು ತಾಲೂಕಿನ ಆರ್ಯಾಪು, ಅರಿಯಡ್ಕ, ಬನ್ನೂರು, ಕೆಯ್ಯೂರು, ಕಬಕ ಸೇರಿದಂತೆ ಬಹುತೇಖ ಗ್ರಾಪಂಗಳಲ್ಲಿ ಕೊಳವೆ ಬಾವಿಯ ಅವಶ್ಯಕತೆ ಇದೆ ಎಂದು ಅಭಿವೃದ್ಧಿ ಅಧಿಕಾರಿಗಳು ಶಾಸಕರ ಗಮನ ಸೆಳೆದರು.
ಪುತ್ತೂರಿನಲ್ಲಿ ತಲೆದೋರಿದ ನೀರಿನ ಸಮಸ್ಯೆ: ಸಾರ್ವಜನಿಕ ಕೊಳವೆ ಬಾವಿಗೆ ಬೇಡಿಕೆ ಶಾಸಕ ಸಂಜೀವ ಮಠಂದೂರು ಮಾತನಾಡಿ, ಕೆಎಂಎಫ್ ವತಿಯಿಂದ ಒಣ ಮೇವು ತರುವ ಟೆಂಡರ್ ಕರೆಯಲಾಗಿತ್ತು. ಆದರೆ ಯಾರೂ ಇವರ ದರದಲ್ಲಿ ಟೆಂಡರ್ ಪಡೆದುಕೊಂಡಿಲ್ಲ. ಹಾಗಾಗಿ ಸಮಸ್ಯೆಯಾಗಿದೆ ಎಂದರು.
ಪಶುಸಂಗೋಪನಾ ಇಲಾಖೆಯ ಡಾ. ಧರ್ಮಪಾಲ, ನಮಗೆ ರೈತರಿಂದ ಒಣ ಮೇವು ಕುರಿತು ಯಾವುದೇ ಬೇಡಿಕೆ ಬಂದಿಲ್ಲ ಎಂದರು. ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ದಂಡೆಯಲ್ಲಿರುವ ನೆಕ್ಕಿಲಾಡಿ ಗ್ರಾಪಂನಲ್ಲಿ ನೀರಿನ ಸಮಸ್ಯೆ ಬಗ್ಗೆ ಪಿಡಿಒ ತಿಳಿಸಿದಾಗ, ಶಾಸಕರು ಎರಡು ಜೀವನದಿಗಳ ಮಧ್ಯೆ ಇರುವ ನೆಕ್ಕಲಾಡಿಯಲ್ಲಿ ನೀರಿಲ್ಲ ಎಂದರೆ ಅರ್ಥವೇನು? ನೀವು ಪೂರಕ ವ್ಯವಸ್ಥೆ ಮಾಡಿಕೊಂಡಿಲ್ಲ. ಇಲ್ಲದಿದ್ದರೆ ನಿಮ್ಮಲ್ಲಿ ನೀರಿನ ಸಮಸ್ಯೆ ಉಂಟಾಗಲು ಸಾಧ್ಯವೇ ಇಲ್ಲ ಎಂದರು.
ರಾಜ್ಯ ಸರ್ಕಾರದ ವತಿಯಿಂದ ಪಡಿತರ ವಿತರಣೆ ನಡೆದಿದೆ. ಇದರಲ್ಲಿ 11,466 ಎಪಿಎಲ್ ಕಾರ್ಡುದಾರರಿಗೆ ಪಡಿತರ ವಿತರಣೆ ಮಾಡಲಾಗಿದೆ. 14,984 ಮಂದಿ ಎಪಿಎಲ್ ಕಾರ್ಡುದಾರರು ಅಕ್ಕಿ ಬೇಡ ಎಂಬ ಸೂಚನೆಯನ್ನು ಆರಂಭದಲ್ಲಿಯೇ ನೀಡಿದ ಹಿನ್ನೆಲೆಯಲ್ಲಿ ಅವರಿಗೆ ಸದ್ಯ ಪಡಿತರ ನೀಡಲು ಸಾಧ್ಯವಾಗುವುದಿಲ್ಲ ಎಂದು ತಹಶೀಲ್ದಾರ್ ರಮೇಶ್ ಬಾಬು ತಿಳಿಸಿದರು. ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಿ ಪ್ರಸ್ತುತ ಪಡಿತರ ಕಾರ್ಡು ಸಿಗದವರಿಗೂ ಅಕ್ಕಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.