ಪುತ್ತೂರು:ಒಂದೆಡೆ ತ್ಯಾಜ್ಯ ವಿಲೇವಾರಿ ಕುರಿತು ಜಾಗೃತಿ ಮೂಡಿಸುವ ಕಸರತ್ತುಗಳು ನಡೆಯುತ್ತಿವೆ. ಇನ್ನೊಂದೆಡೆ ನಗರದ ರಸ್ತೆ, ಹರಿದು ಹೋಗುವ ಕಾಲುವೆಗಳು ತ್ಯಾಜ್ಯದ ಕೊಂಪೆಯಾಗಿ ಬೆಳೆಯುತ್ತಿವೆ.
ತ್ಯಾಜ್ಯದ ಕೊಂಪೆಯಾಗುತ್ತಿರುವ ಪುತ್ತೂರು ನಗರದ ರಸ್ತೆ, ಕಾಲುವೆಗಳು ತ್ಯಾಜ್ಯ ವಿಲೇವಾರಿ ಕುರಿತಂತೆ ನಗರದಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಜನರು ರಾತ್ರಿ ಸಮಯದಲ್ಲಿ ಬೈಪಾಸ್ ರಸ್ತೆ, ನಗರದ ಒಳಗಿನ ಮುಖ್ಯರಸ್ತೆ ಸೇರಿದಂತೆ ಕಾಲುವೆಗಳಲ್ಲಿ ರಾಶಿ ರಾಶಿ ಕಸಗಳನ್ನು ಗೋಣಿ ಚೀಲದಲ್ಲಿ ತಂದು ಎಸೆಯುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದನ್ನು ಗಮನಿಸಿದ ಆಡಳಿತ ಮಂಡಳಿ ನಗರದ ಕೆಲವೆಡೆ ಆಯ್ದ ಜಾಗಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದೆ.
ತ್ಯಾಜ್ಯದ ಕೊಂಪೆಯಾಗಿರುವ ಪುತ್ತೂರು ಕಾಲುವೆಗಳು ಅದಕ್ಕೂ ಹೆದರದ ಜನತೆ ತ್ಯಾಜ್ಯ ಎಸೆಯುವುದನ್ನು ಬಿಟ್ಟಿಲ್ಲ. ಇದಕ್ಕೆ ನಗರದ ಹೊರವಲಯದ ಮುಕ್ವೆ ರಸ್ತೆಯಲ್ಲಿರುವ ಕಸದ ರಾಶಿಯೇ ಉತ್ತಮ ಉದಾಹರಣೆಯಾಗಿದೆ.
ಮುಕ್ವೆಯಲ್ಲಿ ರಸ್ತೆ ಬದಿಯಲ್ಲಿರುವ ತ್ಯಾಜ್ಯವನ್ನು ನಾಯಿಗಳು ಎಳೆದಾಡಿ ಈ ಪ್ರದೇಶದಲ್ಲಿ ದುರ್ನಾತ ಬೀರುತ್ತಿದೆ. ಇಲ್ಲಿ ಈಗಾಗಲೇ ಎರಡು ಬಾರಿ ತ್ಯಾಜ್ಯ ಎಸೆದವರನ್ನು ಪತ್ತೆಹಚ್ಚಿ ದಂಡ ವಿಧಿಸಲಾದರೂ ತ್ಯಾಜ್ಯ ಎಸೆಯುವುದು ಮಾತ್ರ ನಿಂತಿಲ್ಲ. ಈ ಕುರಿತು ಸ್ಥಳೀಯ ನರಿಮೊಗರು ಗ್ರಾಪಂ ವತಿಯಿಂದ ಎಚ್ಚರಿಕೆ ಫಲಕವನ್ನು ಈ ಪ್ರದೇಶದಲ್ಲಿ ಹಾಕಲಾಗಿದೆ. ಆದರೆ, ಅದು ತ್ಯಾಜ್ಯ ಎಸೆಯುವವರ ಕಣ್ಣಿಗೆ ಕಾಣಿಸುತ್ತಿಲ್ಲ.
ನಗರದ ಹೊರವಲಯದ ನೆಕ್ಕರೆ ಎಂಬಲ್ಲಿ ತೋಡೊಂದರಲ್ಲಿ ಕ್ವಿಂಟಾಲ್‌ಗಟ್ಟಲೆ ತ್ಯಾಜ್ಯಗಳನ್ನು ಗೋಣಿ ಚೀಲಗಳಲ್ಲಿ ತಂದು ಸುರಿಯಲಾಗಿದೆ. ಇದನ್ನು ಕೇಳುವವರೇ ಇಲ್ಲದಂತಾಗಿದೆ. ಹೀಗೆ ನಗರದಲ್ಲಿ ಹರಿಯುವ ಬಹುತೇಕ ಕಾಲುವೆಗಳಿಗೆ ತ್ಯಾಜ್ಯವನ್ನು ತಂದು ಸುರಿದ ಪರಿಣಾಮ ಪರಿಸರ ಅಸಹ್ಯ ಪಡುವಂತಾಗಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ ತ್ಯಾಜ್ಯದಿಂದಾಗಿ ಅಪಘಾತಗಳು ಸಂಭವಿಸುವ ಪರಿಸ್ಥಿತಿ ಉಂಟಾಗಲಿದೆ. ಆದ್ದರಿಂದ ತಕ್ಷಣ ನಗರಾಡಳಿತ ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೇ ಈಗಾಗಲೇ ಅಳವಡಿಸಿದ ಸಿಸಿ ಕ್ಯಾಮೆರಾದ ಸರಿಯಾದ ಪರಿಶೀಲನೆಯಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.