ಪುತ್ತೂರು: ಜಾತ್ರೆ-ಉತ್ಸವಾದಿಗಳಲ್ಲಿ ಧಾರ್ಮಿಕ ಆಚರಣೆಯ ಜೊತೆಗೆ ವ್ಯಾಪಾರ ವ್ಯವಹಾರಕ್ಕೆ ಮುಕ್ತ ಅವಕಾಶವಿರುತ್ತದೆ. ಆದರೆ ಈ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶವೇ ಇಲ್ಲ. ಇದು ಪುತ್ತೂರಿನ ಬಲ್ನಾಡು ಉಳ್ಳಾಲ್ತಿ ಕ್ಷೇತ್ರದ ಜಾತ್ರೋತ್ಸವ ವಿಶೇಷ. ಇತಿಹಾಸ ಪ್ರಸಿದ್ಧ ಜಾತ್ರೆಯಲ್ಲಿ ಮಲ್ಲಿಗೆ ಹೂವು ಮಾತ್ರ ಮಾರುತ್ತಾರೆ. ಇದಕ್ಕೆ ಮಾತ್ರ ಗ್ರಾಹಕರು ಹಣ ಕೊಟ್ಟು ಕೊಳ್ಳುವ ಪದ್ಧತಿ ಇಲ್ಲಿಯವರೆಗೆ ಬೆಳೆದುಕೊಂಡು ಬಂದಿದೆ.
ಉಳ್ಳಾಲ್ತಿ ದೈವಾರಾಧನೆ ತಮಿಳುನಾಡಿನಿಂದ ಬಂದ ಆಚರಣೆಯ ಕ್ರಮವಾಗಿದೆ. ತುಳುನಾಡಿನಲ್ಲಿ ಒಟ್ಟು ಪ್ರಮುಖವಾದ ಐದು ಉಳ್ಳಾಲ್ತಿ ದೈವಸ್ಥಾನಗಳಿವೆ. ಮಾಣಿ, ಅನಂತಾಡಿ, ಬಲ್ನಾಡು, ಕೆಳಿಂಜ ಮತ್ತು ಕೇಪು ಈ ಐದು ಕ್ಷೇತ್ರಗಳಲ್ಲಿ ಆರಾಧಿಸಲ್ಪಡುವ ಉಳ್ಳಾಲ್ತಿ ದೈವಗಳ ಹಿಂದೆ ಒಂದೊಂದು ಕಥೆಯಿದೆ. ಈ ಕ್ಷೇತ್ರಗಳಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಬಲ್ನಾಡಿನಲ್ಲಿರುವ ಉಳ್ಳಾಲ್ತಿ ಕ್ಷೇತ್ರವೂ ಒಂದಾಗಿದ್ದು, ಉಳಿದ ನಾಲ್ಕು ಕ್ಷೇತ್ರಗಳಲ್ಲಿ ನಡೆಯುವ ಆಚರಣೆಗಿಂತ ಇಲ್ಲಿ ಕೊಂಚ ಭಿನ್ನ ಆಚರಣೆಯಿದೆ.
ಪುತ್ತೂರಿನ ಮಹಾಲಿಂಗೇಶ್ವರಜಾತ್ರೆಗೂ ಉಳ್ಳಾಲ್ತಿ ಜಾತ್ರೋತ್ಸವಕ್ಕೂ ನಂಟು:ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ಮುಗಿದು, ಧ್ವಜಾರೋಹಣವಾದ ಮರುದಿನವೇ ಬಲ್ನಾಡು ಉಳ್ಳಾಲ್ತಿ ಕ್ಷೇತ್ರದಲ್ಲಿ ಜಾತ್ರೋತ್ಸವಕ್ಕೆ ಗೊನೆಕಡಿಯುವ ಕಾರ್ಯಕ್ರಮ ನಡೆಯುತ್ತದೆ. ಪ್ರತಿ ಏಪ್ರಿಲ್ 28ರಂದು ಬಲ್ನಾಡು ಉಳ್ಳಾಲ್ತಿ ಕ್ಷೇತ್ರದಲ್ಲಿ ಜಾತ್ರೋತ್ಸವ ನಡೆಯುವುದು ಇಲ್ಲಿನ ವಾಡಿಕೆ.