ಮಂಗಳೂರು: ಜೆಎನ್ಯು ವಿವಿನಲ್ಲಿ ಪ್ರವೇಶ ಶುಲ್ಕ ಹಾಗೂ ಹಾಸ್ಟೆಲ್ ಶುಲ್ಕವನ್ನು ವರ್ಷದ ಮಧ್ಯದಲ್ಲಿ ಹೆಚ್ಚಳ ಮಾಡಿರುವುದರಿಂದ ಪರಿಸ್ಥಿತಿ ಬಿಗಡಾಯಿಸಿದೆ ಎಂದು ಜೆಎನ್ಯು ಕನ್ನಡ ವಿಭಾಗದ ಮುಖ್ಯಸ್ಥ, ಸಂಶೋಧಕ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.
ಸರಕಾರ ಸಾಕಷ್ಟು ಅನುದಾನವನ್ನು ನೀಡಿತ್ತು. ಆದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ಹಾಸ್ಟೆಲ್ ವಾರ್ಡನ್ಗಳೊಡನೆ ಚರ್ಚೆ ನಡೆಸದೇ, ಏಕಾಏಕಿ ಶುಲ್ಕ ಹೆಚ್ಚಳ ಮಾಡಿದ್ದೇ ಈಗ ನಡೆದಿರುವ ಅನಾಹುತಕ್ಕೆ ಕಾರಣ ಎಂದರು.
ಡಿಸೆಂಬರ್ 13ಕ್ಕೆ ಸೆಮಿಸ್ಟರ್ ಪರೀಕ್ಷೆಗಳು ಆರಂಭವಾಗುತ್ತಿವೆ. ಇದಕ್ಕೆ ಹಾಜರಾಗದ ವಿದ್ಯಾರ್ಥಿಗಳ ಹೆಸರನ್ನು ವಿವಿ ಕಡತದಿಂದ ಅಳಿಸಿಹಾಕಲಾಗುತ್ತದೆ. ಆದರೆ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ ಎಂದರು.
ವರ್ಷದ ಆರಂಭದಲ್ಲಿಯೇ ಶುಲ್ಕ ಹೆಚ್ಚಳ ಮಾಡಿದ್ದರೆ, ಅಧಿಕ ಶುಲ್ಕ ಕಟ್ಟಲಾಗದವರು ಜೆಎನ್ಯು ವಿವಿಯನ್ನು ಪ್ರವೇಶಿಸುತ್ತಲೇ ಇರಲಿಲ್ಲ. ಇದನ್ನು ಪರಿಗಣಿಸದ ಅಧಿಕಾರಿಗಳು ಕೆಲವು ಕ್ಷೇತ್ರದಲ್ಲಿ ಶೇ. 300 ಹಾಗೂ ಶೇ. 250ರಷ್ಟು ಶುಲ್ಕವನ್ನು ದುಬಾರಿಗೊಳಿಸಿದೆ. ಇದಕ್ಕೆ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ವಿದ್ಯಾರ್ಥಿ ಸಂಘದಲ್ಲಿಯೂ ಈ ಬಗ್ಗೆ ಪ್ರಸ್ತಾವನೆ ಇರಿಸಿ ಅವರ ಅಭಿಪ್ರಾಯ ಸಂಗ್ರಹಿಸಿ ಶುಲ್ಕ ಹೆಚ್ಚಳ ಮಾಡಿದ್ದರೇ, ಪರಿಸ್ಥಿತಿ ಈ ಮಟ್ಟಕ್ಕೆ ಹೋಗುತ್ತಿರಲಿಲ್ಲ. ಎರಡೂ ಕಡೆಗಳಲ್ಲಿಯೂ ಸಂವಾದ ಏರ್ಪಡುತ್ತಿಲ್ಲ. ಅಧಿಕಾರಿಗಳು ಪಟ್ಟು ಬಿಡುತ್ತಿಲ್ಲ, ವಿದ್ಯಾರ್ಥಿಗಳು ಕೂಡಾ ವಿವಿಗೆ ಬೀಗ ಹಾಕಿ, ತರಗತಿಯನ್ನು ಬಹಿಷ್ಕರಿಸಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.
ಈ ನಡುವೆ ಸರಕಾರ ಸಮಿತಿಯೊಂದನ್ನು ರಚಿಸಿ ವಿವಿಯ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ವರದಿ ಮಾಡುವಂತೆ ತಿಳಿಸಿದೆ. ಆ ಸಮಿತಿ ವಿವಿ ಅಧಿಕಾರಿಗಳು, ಡೀನ್ಗಳು, ವಿದ್ಯಾರ್ಥಿಗಳಲ್ಲಿ ಮಾತನಾಡಿ ಶಿಫಾರಸ್ಸು ನೀಡಿದೆ ಎಂದರು.
ವರದಿ ಬರುವುದಕ್ಕಿಂತ ಒಂದು ದಿನ ಮುಂಚೆ ವಿವಿ ಮಧ್ಯರಾತ್ರಿ ಒಂದು ನೋಟೀಸ್ ಹೊರಡಿಸಿ, ಒಂದು ಸಮಿತಿ ರಚಿಸಿದೆ. ಅದರ ಪ್ರಕಾರ ವಿದ್ಯಾರ್ಥಿಗಳ ಶುಲ್ಕ ಹೆಚ್ಚಳದಲ್ಲಿ 50 ಶೇ. ಕಡಿತ, ಬಿಪಿಎಲ್ ಕಾರ್ಡುದಾರರಿಗೆ 75 ಶೇ. ಕಡಿತ ಮಾಡುವಂತೆ ಹೇಳಿಕೊಂಡಿದೆ. ಆದರೆ ವಿದ್ಯಾರ್ಥಿಗಳು ಇದನ್ನು ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ.