ಮಂಗಳೂರು: ನಗರದ ಖಾಸಗಿ ಆಸ್ಪತ್ರೆಯೊಂದು ಕೋವಿಡ್ ರೋಗಿಯ ಮೃತದೇಹ ಬಿಟ್ಟು ಕೊಡಲು 5.23 ಲಕ್ಷ ರೂ. ಬಿಲ್ ದಾಖಲು ಮಾಡಿದ ಘಟನೆ ನಡೆದಿದೆ.
ಆದರೆ, ಇದನ್ನ ಖಂಡಿಸಿ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಅವರು ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಈಗ ಆಸ್ಪತ್ರೆಯ ಬಿಲ್‌ನ 1 ಲಕ್ಷ ರೂ.ಗೆ ಇಳಿಸಲಾಗಿದೆ.
ಮೃತ ಕೋವಿಡ್ ಸೋಂಕಿತ 30 ವರ್ಷದ ಯುವಕನಾಗಿದ್ದು, ಅವರಿಗೆ ವಿವಾಹವಾಗಿ ಕೇವಲ ಎರಡು ತಿಂಗಳಾಗಿದೆ. ಅವರಿಗೆ ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆ ನಗರದ ಇಂದಿರಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಳೆದ ಹತ್ತು ದಿನಗಳಿಂದ ಅವರು ಆಸ್ಪತ್ರೆಯಲ್ಲಿದ್ದು, ಕುಟುಂಬಸ್ಥರಿಗೆ ಅವರ ಮುಖವನ್ನು ನೋಡಲು ಬಿಟ್ಟಿಲ್ಲ ಎಂದು ಆರೋಪಿಸಲಾಗಿದೆ.
ಈಗಾಗಲೇ ಮೆಡಿಕಲ್ ಬಿಲ್ ಎಂದು 2.75 ಲಕ್ಷ ರೂ. ಪಾವತಿಸಲು ಆಸ್ಪತ್ರೆ ತಿಳಿಸಿದ್ದು, ಅದನ್ನು ಕಟ್ಟಲಾಗಿದೆ. ಅಲ್ಲದೆ ಆಸ್ಪತ್ರೆಗೆ ದಾಖಲಾಗುವ ವೇಳೆ 50 ಸಾವಿರ ರೂ. ಪಾವತಿಸಲಾಗಿದೆ.
ಇದೀಗ ಸೋಂಕಿತನ ಮೃತದೇಹ ಕೊಡಬೇಕಾದರೆ 5 ಲಕ್ಷ ರೂ. ವರೆಗೆ ಪಾವತಿಸಲು ಆಸ್ಪತ್ರೆ ಹೇಳಿದೆ. ಆದ್ದರಿಂದ ಸುಹೈಲ್ ಕಂದಕ್ ಅವರು ದ.ಕ.ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದಾರೆ. ಅವರು ತಕ್ಷಣ ಜಿಲ್ಲೆಯ ಆರೋಗ್ಯ ಅಧಿಕಾರಿ, ನೋಡಲ್ ಅಧಿಕಾರಿಗೆ ತಿಳಿಸಿ ಈ ಬಗ್ಗೆ ಸಮಸ್ಯೆ ಬಗೆಹರಿಸಲು ತಿಳಿಸಿದ್ದಾರೆ.
ಅಷ್ಟರಲ್ಲಾಗಲೇ ಸುಹೈಲ್ ಕಂದಕ್ ಅವರು ಆಸ್ಪತ್ರೆಯ ಮುಂಭಾಗವೇ ಪ್ರತಿಭಟನೆಗೆ ನಿಂತಿದ್ದಾರೆ. ತಕ್ಷಣ ನೋಡಲ್ ಅಧಿಕಾರಿ ಡಾ.ರತ್ನಾಕರ್ ಹಾಗೂ ಅವರ ತಂಡ, ಕದ್ರಿ ಪೊಲೀಸ್ ಇನ್ಸ್‌ಪೆಕ್ಟರ್ ಸವಿತಾತೇಜ ಅವರು ಆಸ್ಪತ್ರೆಗೆ ಧಾವಿಸಿದ್ದಾರೆ. ಬಳಿಕ ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಮಾತನಾಡಿ ಬಿಲ್‌ನ 1 ಲಕ್ಷ ರೂ. ಗೆ ಇಳಿಸಿದ್ದಾರೆ ಎಂದು ಸುಹೈಲ್ ಕಂದಕ್ ತಿಳಿಸಿದ್ದಾರೆ.
ಅಲ್ಲದೆ ಮೃತರೋಗಿಯು ಕೋವಿಡ್‌ನಿಂದ ಮೃತಪಟ್ಟಿದ್ದಲ್ಲ, ಬದಲಾಗಿ ಆಸ್ಪತ್ರೆಯವರ ನಿರ್ಲಕ್ಷ್ಯದಿಂದ ಮೃತಪಟ್ಟಿರಬಹುದೆಂದು ಸುಹೈಲ್ ಕಂದಕ್ ಶಂಕೆ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ಸೋಂಕಿತ ಮೃತಪಡುವುದಕ್ಕೆ ಹಾಗೂ ಸರಕಾರದ ಕೋವಿಡ್ ನಿಯಮಾವಳಿಗಳನ್ನು ಮೀರಿ ಬಿಲ್ ಪಾವತಿಸುವ ಬಗ್ಗೆಯೂ ತಾನು ಕಾನೂನು ಹೋರಾಟ ನಡೆಸುವುದಾಗಿ ಸುಹೈಲ್ ಕಂದಕ್ ಗುಡುಗಿದ್ದಾರೆ.