ಮಂಗಳೂರು: ಮೂಲ್ಕಿಯ ತಾಳಿಪಾಡಿ ಗ್ರಾಮದ ಪುನರೂರು ಎಂಬಲ್ಲಿ ಮೂವರು ಮಕ್ಕಳು ಮತ್ತು ಪತ್ನಿಯನ್ನು ವ್ಯಕ್ತಿಯೊಬ್ಬ ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದು, ಮಕ್ಕಳೆಲ್ಲರೂ ಸಾವನ್ನಪ್ಪಿದ್ದಾರೆ. ಮಹಿಳೆ ಮತ್ತು ಕೃತ್ಯ ಎಸಗಿದ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ.
ರಶ್ಮಿತಾ (13), ಉದಯ (11) ಮತ್ತು ದಕ್ಷಿತ್ (04) ಎಂಬ ಮಕ್ಕಳು ಸಾವನ್ನಪ್ಪಿದವರು. ಹಿತೇಶ್ ಶೆಟ್ಟಿಗಾರ್ ಮತ್ತು ಆತನ ಪತ್ನಿ ಲಕ್ಷ್ಮೀಯನ್ನು ರಕ್ಷಿಸಲಾಗಿದೆ. ಆರೋಪಿ ಹಿತೇಶ್ ಶೆಟ್ಟಿಗಾರ್ ಶಾಲೆಯಿಂದ ಬಂದಿದ್ದ ಮೂವರು ಮಕ್ಕಳನ್ನು ಬಾವಿಗೆ ತಳ್ಳಿದ್ದಾನೆ. ಪತ್ನಿಯು ಮಕ್ಕಳ ಬಗ್ಗೆ ವಿಚಾರಿಸಿದಾಗ ಎಲ್ಲೋ ಅಡಗಿ ಕುಳಿತಿದ್ದಾರೆ ಎಂದು ಸಬೂಬು ನೀಡಿದ್ದ ಎನ್ನಲಾಗಿದೆ.
ಮಂಗಳೂರು: 3 ಮಕ್ಕಳನ್ನು ಬಾವಿಗೆ ತಳ್ಳಿ ಕೊಂದು ಪತ್ನಿಯೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಬಳಿಕ ಪತ್ನಿಯು ಅನುಮಾನಗೊಂಡು ಹುಡುಕಾಟಕ್ಕಿಳಿದು ಪಕ್ಕದ ಮನೆಯ ಬಾವಿಯಲ್ಲಿ ನೋಡಿದಾಗ ಮಕ್ಕಳನ್ನು ತಳ್ಳಿರುವುದು ಗಮನಕ್ಕೆ ಬಂದಿದೆ. ಈ ವೇಳೆ ಲಕ್ಷ್ಮೀಯನ್ನು ಹಿಂಬಾಲಿಸಿಕೊಂಡು ಬಂದ ಹಿತೇಶ್, ಆಕೆಯನ್ನು ಬಾವಿಗೆ ತಳ್ಳಿ ಬಳಿಕ ತಾನೂ ಹಾರಿದ್ದಾನೆ. ಇದನ್ನು ಸ್ಥಳೀಯರು ಗಮನಿಸಿದ್ದು, ಪತಿ, ಪತ್ನಿ ಮತ್ತು ಮಕ್ಕಳನ್ನು ಮೇಲಕ್ಕೆತ್ತಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಮಕ್ಕಳು ಆಸ್ಪತ್ರೆಗೆ ಸಾಗಿಸುವಾಗಲೇ ಸಾವನ್ನಪ್ಪಿದ್ದಾರೆ.
ಹಿತೇಶ್ ಶೆಟ್ಟಿಗಾರ್ ಕೂಲಿ ಕೆಲಸ ಮಾಡಿಕೊಂಡಿದ್ದು, ಪತ್ನಿ ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದಳು. ಇತ್ತೀಚೆಗೆ ಅಂಗಡಿಯೊಂದರಲ್ಲಿ ಕ್ಲೀನಿಂಗ್ ಕೆಲಸಕ್ಕೆ ಸೇರಿಕೊಂಡಿದ್ದರು. ಈ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಮಳೆ ನೀರು ಹೊಂಡದಲ್ಲಿ ಬಿದ್ದು ನಾಲ್ವರು ಬಾಲಕರ ದುರ್ಮರಣ