ಸುಬ್ರಹ್ಮಣ್ಯ: ವಿಶ್ವ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ದೀಪಾವಳಿಯ ಬಲಿಪಾಡ್ಯಮಿಯಂದು ಅಂದರೆ ಇಂದು ಶ್ರೀ ದೇವರ ಹೊರಾಂಗಣ ಪ್ರವೇಶವಾಗುವ ಮೂಲಕ ಹೊರಾಂಗಣ ಉತ್ಸವ ಆರಂಭವಾಗಲಿದೆ.
ಬಲಿಪಾಡ್ಯಮಿ ದಿನದಂದು ದೀಪಾವಳಿ ಪ್ರಯುಕ್ತ ಪಾಲಕಿ ಮತ್ತು ಬಂಡಿ ಉತ್ಸವಗೂಳು ನೆರವೇರುತ್ತದೆ. ಈ ಮೂಲಕ ಕುಕ್ಕೆ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಹೊರಾಂಗಣ ವರ್ಷಾವಧಿ ಉತ್ಸವಗಳು ಆರಂಭವಾಗುತ್ತದೆ. ದೀಪಾವಳಿಯ ಮುಂದಿನ ದಿನಗಳಲ್ಲಿ ದೇವಳದಲ್ಲಿ ಶ್ರೀ ದೇವರ ಪಾಲಕಿ ಉತ್ಸವ, ಭಂಡಿ ಉತ್ಸವ ಹಾಗೂ ಮಂಟಪೋತ್ಸವ ಸೇವೆಗಳು ನಡೆಯುತ್ತದೆ.
ಮುಂದೆ ಬರುವ ಲಕ್ಷ ದೀಪೋತ್ಸವದ ನಂತರ ಕ್ಷೇತ್ರದ ರಥಬೀದಿಯಲ್ಲಿ ರಥೋತ್ಸವಗಳು ನಡೆಯಲಿದೆ. ನಾಡಿನ ಉಳಿದ ದೇವಾಲಯಗಳಲ್ಲಿ ಪತ್ತನಾಜೆಯಂದು ಕೊನೆಯ ಉತ್ಸವವಾಗಿ ಉತ್ಸವ ಮೂರ್ತಿಯು ಗರ್ಭಗುಡಿ ಪ್ರವೇಶಿಸುವುದರೊಂದಿಗೆ ಉತ್ಸವಗಳು ಕೊನೆಯಾಗುತ್ತದೆ. ಆದರೆ ಕುಕ್ಕೆಯಲ್ಲಿ ಮಾತ್ರ ಜೇಷ್ಠ ಶುದ್ಧ ಷಷ್ಠಿಯಂದು ಕೊನೆಯ ಉತ್ಸವವು ನಡೆದು, ದೀಪಾವಳಿಯ ಅಮವಾಸ್ಯೆಯಂದು ಉತ್ಸವ ಆರಂಭವಾಗುತ್ತದೆ.