ಮಂಗಳೂರು: ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಅಧಿಕಾರಕ್ಕೆ ಬಂದರೆ, ತಾಕತ್ತಿದ್ದರೆ ಬಜರಂಗದಳ ನಿಷೇಧ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್‌ಗೆ ಸವಾಲೆಸೆದಿದ್ದಾರೆ.
ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅವಸಾನದತ್ತ ಸಾಗುತ್ತಿದೆ. ತನ್ನ ಅಂತಿಮಯಾತ್ರೆಯ ಶವಪೆಟ್ಟಿಗೆಗೆ ಮೊಳೆ ಹೊಡೆಯುವ ಕೆಲಸವನ್ನು ಕಾಂಗ್ರೆಸ್ ಸ್ವತಃ ಮಾಡುತ್ತಿದೆ. ಬಜರಂಗದಳ ನಿಷೇಧ ಮಾಡುತ್ತೇವೆ ಎಂದು ಇಂದು ಬಿಡುಗಡೆ ಮಾಡಿರುವ ತಮ್ಮ ಪ್ರಣಾಳಿಕೆಯಲ್ಲಿ ಹಾಕಿದ್ದಾರೆ. ಈ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ನಾನು ಹೇಳ ಬಯಸುದೇನೆಂದರೆ, ನೆಹರೂ ಅವರು ಆರ್ಎಸ್ಎಸ್ ನಿಷೇಧ ಮಾಡಲು ಹೊರಟಿದ್ದರು. ಅಲ್ಲದೆ ಇಂದಿರಾಗಾಂಧಿ ಅವರೂ ಆರ್ಎಸ್ಎಸ್ ನಿಷೇಧ ಮಾಡಲು ಹೋದರು. ಇದರ ಪರಿಣಾಮವಾಗಿ ಇಂದು ದೇಶದಲ್ಲಿ ಆರ್ಎಸ್ಎಸ್ ಮತ್ತು ಹಿಂದೂ ಸಂಘಟನೆಗಳು ಬಲವಾಗಿ ಬೆಳೆದು ನಿಂತಿದೆ ಎಂದು ಹೇಳಿದರು.
ಕಾಂಗ್ರೆಸ್ನವರು ಜನರ ಭಾವನೆಗಳನ್ನು ಪ್ರಶ್ನೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ರಾಷ್ಟ್ರ ಹಿತದ ಕೆಲಸ ಮಾಡುವ ಸಂಘಟನೆಗಳನ್ನು ನಿಷೇಧ ಮಾಡಿ ಎಸ್ಡಿಪಿಐನಂತಹ ಸಂಘಟನೆಗಳೊಂದಿಗೆ ಒಳ ಒಪ್ಪಂದ ಮಾಡುತ್ತೀರಿ. ಚುನಾವಣೆ ಬಂದಾಗ ಇಂತವರೊಂದಿಗೆ ಸಂಧಾನ ಮಾಡಿಕೊಳ್ಳುತ್ತೀರಿ. ವಿವಿಧ ಪ್ರಕರಣ ಸಂಬಂಧ ಜೈಲಿನಲ್ಲಿದ್ದ ಪಿಎಫ್ಐ ಕಾರ್ಯಕರ್ತರನ್ನು ಬಿಡುಗಡೆ ಮಾಡಿದ್ದೀರಿ. ಜೊತೆಗೆ ಹಿಂದೂ ಸಮಾಜಕ್ಕೆ ಅವಮಾನ ಮಾಡಿರುವ ನಿಮಗೆ ಈ ದೇಶದ ಹನುಮ ಭಕ್ತರಾದ ಜನ ದಾರಿ ತೋರಿಸುತ್ತಾರೆ ಎಂದು ಹೇಳಿದರು.