ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯ ಮುಕ್ರಂಪಾಡಿಯಲ್ಲಿ ರಸ್ತೆ ಬದಿಯಲ್ಲೇ ತ್ಯಾಜ್ಯ ಕಸಗಳನ್ನು ಎಸೆದು ಹೋಗುತ್ತಿದ್ದ ಇಬ್ಬರಿಗೆ ಪುತ್ತೂರು ನಗರಸಭೆ ಅಧಿಕಾರಿಗಳು ತಲಾ 5 ಸಾವಿರ ರೂ. ದಂಡ ವಿಧಿಸಿದ್ದಾರೆ.
ಪುತ್ತೂರು: ರಸ್ತೆ ಬದಿಯಲ್ಲಿ ಕಸ ಎಸೆಯುತ್ತಿದ್ದವರಿಂದ ಸ್ಥಳದಲ್ಲೇ ದಂಡ ವಸೂಲಿ ನಗರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ಮನೆ ಮನೆ ತ್ಯಾಜ್ಯ ಸಂಗ್ರಹ ನಡೆಯುತ್ತಿದ್ದರೂ ಕೆಲವೊಂದು ಕಡೆ ರಸ್ತೆ ಬದಿಯಲ್ಲಿ ರಾಶಿ ರಾಶಿ ಕಸಗಳನ್ನು ಹಾಕಿ ಪರಿಸರ ಮಲೀನಗೊಳಿಸುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಕಸದ ರಾಶಿ ಇರುವ ಸ್ಥಳಗಳ ಬಳಿ ಹದ್ದಿನ ಕಣ್ಣಿಟ್ಟು ಕಸ ಹಾಕುವವರನ್ನು ಹಿಡಿಯಲು ಕಾದು ಕುಳಿತಿದ್ದರು.
ಪುತ್ತೂರು ಮುಕ್ರಂಪಾಡಿಯ ಸುಭದ್ರ ಕಲ್ಯಾಣ ಮಂಟಪದ ಬಳಿಯೂ ಬೆಳಗ್ಗಿನಿಂದ ಕಾದು ಕುಳಿತ ವೇಳೆ ಸಂಪ್ಯ ಕಡೆಯಿಂದ ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ಇಬ್ಬರು ಕಸ ಎಸೆದು ತೆರಳುವಷ್ಟರಲ್ಲಿ ಅವರನ್ನು ನಗರಸಭೆ ಸಿಬ್ಬಂದಿ ಸುತ್ತುವರಿದು ತಡೆದರು. ಈ ವೇಳೆ ಸ್ವಲ್ಪ ಗೊಂದಲ ಏರ್ಪಟ್ಟಾಗ ನಗರಸಭೆ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಆಗಮಿಸಿ ಕಸ ಎಸೆಯುವವರನ್ನು ತರಾಟೆಗೆ ತೆಗೆದುಕೊಂಡರು.
ಕೊನೆಗೆ ಕಸ ಎಸೆದ ಸಂಪ್ಯದ ವ್ಯಕ್ತಿಗಳಾದ ಉಸ್ಮಾನ್ ಮತ್ತು ಅಶ್ರಫ್ ಎಂಬುವರಿಗೆ ತಲಾ ರೂ. 5 ಸಾವಿರ ದಂಡ ವಿಧಿಸಿದರು. ನಗರಸಭೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅರುಣ್ ಕೆ., ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ ಮತ್ತು ಶ್ವೇತಾ ಕಿರಣ್, ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ, ಸಿಬ್ಬಂದಿ ಅಮಿತ್‌ರಾಜ್, ನಗೇಶ್, ಜೀಪು ಚಾಲಕ ರಾಧಾಕೃಷ್ಣ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.