ಮಂಗಳೂರು:ಕೊರೊನಾ ಸಂಕಷ್ಟ ಸಮಯದಲ್ಲಿ ಜನರ ಸಂಕಷ್ಟಕ್ಕೆ ಸರ್ಕಾರ ಉತ್ತಮವಾಗಿ ಸ್ಪಂದಿಸಿದೆ. ಆದರೆ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರದ ಮೇಲೆ ಅನವಶ್ಯಕ ಆರೋಪ ಮಾಡುತ್ತಿದೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಡಿಕೆಶಿ ಅಧ್ಯಕ್ಷರಾದ ಬಳಿಕ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನ್ನು ಅನುಭವಿಸಿದೆ. ಇದರಿಂದ ವಿಚಲಿತಗೊಂಡಿರುವ ಡಿಕೆಶಿ ಅವರು ಅನಾವಶ್ಯಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದರು.
ಬಿಜೆಪಿ ಯಾವ ರೀತಿ ಕಾರ್ಯಕ್ರಮ ಮಾಡುತ್ತದೆ ಅದರಂತೆ ಕಾಂಗ್ರೆಸ್ ಮಾಡುತ್ತಿದೆ. ಡಿಕೆಶಿ ಅವರಿಗೆ ಯಾವುದೇ ಜನ ಬೆಂಬಲವಿಲ್ಲ, ಅವರ ಪಕ್ಷದವರೇ ಅವರನ್ನು ಬೆಂಬಲಿಸುತ್ತಿಲ್ಲ, ಅವರ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಡಿಕೆಶಿಯನ್ನು ಒಪ್ಪುತ್ತಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಗೋಮಾಂಸ ತಿನ್ನುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಸಿದ್ದರಾಮಯ್ಯ ಹಿಂದೂಗಳ, ಕೊಡವರ ಭಾವನೆಗೆ ಧಕ್ಕೆ ತಂದಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕೊಡವರ ಭಾವನೆಗೆ ಧಕ್ಕೆ ತರುವ ಯಾವ ಹಕ್ಕಿಲ್ಲ ಎಂದರು.
ಚುನಾವಣೆಯಲ್ಲಿ ಒಂದೆರೆಡು ಸ್ಥಾನ ಗೆದ್ದ ಸಂದರ್ಭದಲ್ಲಿ ಎಸ್ಡಿಪಿಐ ಕಾರ್ಯಕರ್ತರು ಪಾಕ್ ಪರ ಘೋಷಣೆ ಹಾಕಿದ್ದಾರೆ. ಭಾರತದ ವಿರೋಧಿ ದೇಶ ಪಾಕ್ ಪರ ಮಾತಾಡುವವರನ್ನು ದೇಶದ್ರೋಹಿ ಎಂದು ಘೋಷಣೆ ಮಾಡುವ ಕಾಲ ದೂರವಿಲ್ಲ, ಇದಕ್ಕೆ ಬೇಕಾದ ಕಾನೂನು ಸರ್ಕಾರ ಮಾಡಬೇಕು. ಬಿಜೆಪಿ ಕಾರ್ಯಕರ್ತರು ಪಾಕ್ ಪರ ಘೋಷಣೆ ಕೂಗಲು ಸಾಧ್ಯವಿಲ್ಲ. ಇದು ಮೋಸದಾಟವಾಗಿದ್ದು, ಅನವಶ್ಯಕ ಆರೋಪ ಮಾಡಲಾಗುತ್ತಿದೆ. ಅವರ ದೇಶದ್ರೋಹ ಮುಚ್ಚಿಡಲು ಬಿಜೆಪಿ ಕಾರ್ಯಕರ್ತರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.