ಪುತ್ತೂರು: ಶಾಲೆಗಳಲ್ಲಿ ಮಕ್ಕಳಿಗೆ ಮೂಲ ಸೌಕರ್ಯಗಳ ಜೊತೆಗೆ ಅವರ ಕಲಿಕೆಗೆ ಪೂರಕವಾದ ಎಲ್ಲಾ ವಾತಾವರಣ ನಿರ್ಮಾಣಗೊಂಡು ಅವರ ಕಲಿಕಾ ಮಟ್ಟ ಸುಧಾರಣೆಯಾಗಬೇಕು. ಅವರ ಸರ್ವತೋಮುಖ ಬೆಳವಣಿಗೆಯಾಗಬೇಕು. ಮಕ್ಕಳ ಮಾಸೋತ್ಸವವು ಅವರ ಹರ್ಷೋತ್ಸವವಾಗಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಮಕ್ಕಳ ಮಾಸೋತ್ಸವ ಸಮಿತಿ ದ.ಕ.ಜಿಲ್ಲೆ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದ.ಕ.ಜಿಲ್ಲೆ, ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು, ನಗರಸಭೆ ಪುತ್ತೂರು, ತಾಪಂ ಪುತ್ತೂರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪುತ್ತೂರು ಇವುಗಳ ಸಹಯೋಗದಲ್ಲಿ ಪುತ್ತೂರು ತಾಪಂ ಕಚೇರಿ ಸಭಾಂಗಣದಲ್ಲಿ ನಡೆದ "ಮಕ್ಕಳೊಂದಿಗೆ ಜನಪ್ರತಿನಿಧಿಗಳ ಸಂವಾದ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳದ್ದು ಪ್ರಾಂಜಲವಾದ ಮನಸ್ಸು, ಅದರಲ್ಲಿ ಗುಪ್ತ ಕಾರ್ಯಸೂಚಿಗಳಿಲ್ಲ. ಮಕ್ಕಳ ಭಾವನೆಗಳನ್ನು ಅರಿತುಕೊಂಡು ಅದೇ ಪ್ರಾಂಜಲ ಮನಸ್ಸಿನಲ್ಲಿ ಅವರ ಸಮಸ್ಯೆಗಳನ್ನು ಪರಿಹರಿಸುವ ಕ್ರಮ ಮತ್ತು ಉತ್ತರಗಳನ್ನು ಕಂಡು ಕೊಳ್ಳುವ ಪ್ರಯತ್ನಗಳನ್ನು ನಡೆಸಬೇಕಾಗಿದೆ. ಮಕ್ಕಳಲ್ಲಿ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಬೆಳಕು ಚೆಲ್ಲುವ ಹೊಸತನದ ವಿಚಾರಗಳು ಮೂಡಿಸವಲ್ಲಿ ಎಲ್ಲರ ಶ್ರಮ ಅಗತ್ಯವಾಗಿದೆ ಎಂದರು.
ನಗರದ ಶಾಲೆಗಳಿಗೆ ಆಗಮಿಸುವ ಮಕ್ಕಳಿಗೆ ಬಸ್ಸಿನ ವ್ಯವಸ್ಥೆ ಬೇಕು. ಶಾಲೆಗಳಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ಆರ್ಟಿಇ ಕಾಯಿದೆಯಡಿ ನಿಗದಿಪಡಿಸಲಾಗಿರುವ ಶಿಕ್ಷಕರ ಹುದ್ದೆಯನ್ನು ಹೆಚ್ಚುವರಿಗೊಳಿಸಬೇಕು. ಎಲ್ಲ ಅಲೆಮಾರಿ ಮಕ್ಕಳಿಗೂ ಶಿಕ್ಷಣ ಸಿಗುವಂತೆ ಕ್ರಮ ಕೈಗೊಳ್ಳಬೇಕು. ಶಾಲೆಗಳಿಗೆ ಕಂಪ್ಯೂಟರ್ ವ್ಯವಸ್ಥೆ ಬೇಕು ಎಂಬ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ನಗರ ವ್ಯಾಪ್ತಿಯ ಶಾಲೆಗಳ ಮಕ್ಕಳು ಶಾಸಕರು ಹಾಗೂ ನಗರಸಭಾ ಅಧ್ಯಕ್ಷರು ಮುಂದಿಟ್ಟರು.