ಕರ್ನಾಟಕ

karnataka

ETV Bharat / state

ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣ: ಅಪರಾಧಿಗೆ 10 ವರ್ಷ ಜೈಲು, 50 ಸಾವಿರ ರೂ. ದಂಡ

2018-19ರ ನಡುವೆ ಮಂಗಳೂರಿನ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪ್ರಾಪ್ತೆಯ ಅತ್ಯಾಚಾರ ಪ್ರಕರಣದ ಆರೋಪಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

Minor girl rape convict sentenced 10 year prison
ಮಂಗಳೂರು ಅಪ್ರಾಪ್ತೆಯ ಅತ್ಯಾಚಾರ ಪ್ರಕರಣ

By

Published : Mar 18, 2021, 9:22 PM IST

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಯ ಮೇಲಿನ ಆರೋಪ ಸಾಬೀತಾದ ಹಿನ್ನೆಲೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಪೋಕ್ಸೋ ವಿಶೇಷ ನ್ಯಾಯಾಲಯ ಆರೋಪಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:ನಗರದ ಮುಲ್ಕಿ‌ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ 17 ವರ್ಷದ ಅಪ್ರಾಪ್ತೆಯ ಮನೆಗೆ ಅದೇ ಗ್ರಾಮದ ದಿನೇಶ್ ಶೆಟ್ಟಿ (38) ಎಂಬಾತ ಬರುತ್ತಿದ್ದ. ಈ ವೇಳೆ‌ ಆಕೆಯೊಂದಿಗೆ ಸಲುಗೆ ಬೆಳೆಸಿಕೊಂಡ ದಿನೇಶ್ ಶೆಟ್ಟಿ, ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆಯೊಂದಿಗೆ ‌‌2018‌ ಡಿ. 12ರಂದು ಹಾಗೂ 2019ರ ಜ. 6ರಂದು ಎರಡು ಬಾರಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ಪರಿಣಾಮ ಬಾಲಕಿ‌ ಗರ್ಭಿಣಿಯಾಗಿರುವುದು ಎರಡು ತಿಂಗಳ ಬಳಿಕ ತಿಳಿದು ಬಂದಿತ್ತು. ಈ ಬಗ್ಗೆ ಅಪ್ರಾಪ್ತೆಯ ಪೋಷಕರು ಮುಲ್ಕಿ‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಂದಿನ ಮುಲ್ಕಿ ಪೊಲೀಸ್ ಇನ್ಸ್​ಪೆಕ್ಟರ್ ಪಿ.ಎಲ್.ಸಿದ್ದರಾಜು ಆರೋಪಿ‌ ದಿನೇಶ್ ಶೆಟ್ಟಿಯನ್ನು ಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಓದಿ : ಆರ್​ಟಿಪಿಎಸ್ ಟೆಂಡರ್ ರದ್ದು ಕೋರಿ ಪಿಐಎಲ್: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಪೋಕ್ಸೋ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿ‌ 15 ಜನರ ಸಾಕ್ಷಿ ಹಾಗೂ 12 ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ಅಲ್ಲದೆ ಬೆಂಗಳೂರು ವಿಧಿ ವಿಜ್ಞಾನ ಕೇಂದ್ರಕ್ಕೆ ಕಳುಹಿಸಿರುವ ಡಿಎನ್ಎ ವರದಿಯಲ್ಲಿಯೂ ಆರೋಪಿ ದಿನೇಶ್ ಶೆಟ್ಟಿಯೇ ಅಪ್ರಾಪ್ತೆಯನ್ನು ಗರ್ಭಿಣಿಯಾಗಿಸಿದ್ದ ಎಂದು ಸಾಬೀತಾಗಿದೆ. ಈ ಹಿನ್ನೆಲೆ ನ್ಯಾಯಾಧೀಶೆ ಸಾವಿತ್ರಿ ವಿ. ಭಟ್ ಅವರು ಐಪಿಸಿ ಸೆಕ್ಷನ್ 376 (ಅತ್ಯಾಚಾರ)ರ ಪ್ರಕಾರ 7 ವರ್ಷ ಕಠಿಣ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ, ಅಪರಾಧಿ ದಂಡ ತೆರಲು ತಪ್ಪಿದ್ದಲ್ಲಿ ಮತ್ತೆ 1 ತಿಂಗಳ ಶಿಕ್ಷೆ, ಐಪಿಸಿ ಸೆಕ್ಷನ್ 6 (ಪೋಕ್ಸೋ)ರ ಪ್ರಕಾರ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, 50 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದ್ದಲ್ಲಿ ಮತ್ತೆ ಎರಡು ತಿಂಗಳ ಕಾಲ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ‌ ಸಿ.ವೆಂಕಟರಮಣ ಸ್ವಾಮಿ ‌ವಾದಿಸಿದ್ದಾರೆ.

ABOUT THE AUTHOR

...view details