ಉಳ್ಳಾಲ (ದಕ್ಷಿಣಕನ್ನಡ): ಹೇರ್ ಡೈ ಹಾಕಿದಾಗ ಒಮ್ಮೆಗೆ ಕೂದಲು ಕಪ್ಪಾಗತ್ತೆ, ಆಮೇಲೆ ತನ್ನಿಂತಾನೇ ಬಿಳಿಯಾಗುತ್ತದೆ. ಅದೇ ರೀತಿಯಲ್ಲಿ ರಸ್ತೆ ಉಳಿಸಲು ಸಮುದ್ರ ತೀರದಲ್ಲಿ ಮರಳು ಹಾಕಿ ಮಳೆಗಾಲದಲ್ಲಿ ಅದು ಕೊಚ್ಚಿಕೊಂಡು ಹೋಗುವಂತಹ ಕಾಮಗಾರಿ ನಡೆಸದಿರಿ ಎಂದು ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್. ಅಂಗಾರ ಅಧಿಕಾರಿಗಳಿಗೆ ಸೂಚಿಸಿದರು.
ಕಡಲ್ಕೊರೆತ ಶಾಶ್ವತ ಪರಿಹಾರ ಕಾಮಗಾರಿ ಪ್ರದೇಶಕ್ಕೆ ಸಚಿವ ಎಸ್.ಅಂಗಾರ ಭೇಟಿ ಸೋಮೇಶ್ವರ, ಉಚ್ಚಿಲ ಮತ್ತು ಮೊಗವೀರಪಟ್ಣ ತೀರದಲ್ಲಿ ನಡೆಯುತ್ತಿರುವ ಕಡಲ್ಕೊರೆತ ಶಾಶ್ವತ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿದ ಸಚಿವರು, ಬಂದರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಮಾ.30ರಂದು ಕಾಮಗಾರಿ ಮುಗಿಸಿ ಬಂದರು ಇಲಾಖೆಗೆ ವಹಿಸುವ ಕುರಿತು ಕಚೇರಿಯಲ್ಲಿ ಮಾತನಾಡುತ್ತೇನೆ. ಉಚ್ಚಿಲ ಬೆಟ್ಟಂಪಾಡಿ ರಸ್ತೆ ಉಳಿಸುವ ಸಲುವಾಗಿ ಕೋಟ್ಯಂತರ ರೂ. ಅನುದಾನ ವಿನಿಯೋಗಿಸಲಾಗಿದೆ. ಆದರೆ, ಅದಕ್ಕಾಗಿ ಮರಳಿನ ರಾಶಿಯನ್ನು ಹಾಕಿರುವುದು ಕಂಡುಬಂದಿದೆ. ಇದರಿಂದ ರಸ್ತೆಯನ್ನು ಶಾಶ್ವತವಾಗಿ ಉಳಿಸಲು ಸಾಧ್ಯವಿಲ್ಲ. ಗಾಳಿ ಬರುವ ಕಡೆಯತ್ತ ಅಲೆಗಳಿರುತ್ತದೆ. ಯಾವ ಭಾಗದಿಂದಲಾದರೂ ಅಲೆಗಳು ಬಂದು, ಸಂಗ್ರಹಿಸಲಾದ ಮರಳು ಮತ್ತೆ ಸಮುದ್ರ ಪಾಲಾಗಬಹುದು. ಅದಕ್ಕಾಗಿ ಈ ಬಗ್ಗೆ ಶೀಘ್ರವೇ ಕ್ರಮಕೈಗೊಳ್ಳಿ ಎಂದರು.
ಇನ್ನು, ರಾಜ್ಯಾಂಗ, ಕಾರ್ಯಾಂಗದ ಜೊತೆಗೆ ಪರಸ್ಪರ ವಿಶ್ವಾಸದಲ್ಲಿ ಕೆಲಸ ಮಾಡಬೇಕಿದೆ. ಸಮಸ್ಯೆಗೆ ಪರಿಹಾರ ಕಂಡುಹಿಡಿಯಲೆಂದೇ ಬಂದಿರುವೆ. ಕಣ್ಣಾರೆ ಕಂಡ ಸಮಸ್ಯೆಗಳಿಗೆ ಚುನಾಯಿತ ಪ್ರತಿನಿಧಿಯಾಗಿ ನನ್ನ ಕಡೆಯಿಂದ ಸಾಧ್ಯವಾಗುವಷ್ಟು ಗಮನಕೊಟ್ಟು ಸ್ಪಂದಿಸುತ್ತೇನೆ ಎಂದರು.
ಶೀಘ್ರದಲ್ಲೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ:
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಮಾತನಾಡಿ, ಅಲೆಗಳ ತೀವ್ರತೆಯ ಅಧ್ಯಯನವನ್ನು ಬಂದರು ಇಲಾಖೆ ಶೀಘ್ರವೇ ನಡೆಸಬೇಕು. ಎಲ್ಲಾ ದುಡ್ಡನ್ನು ಸಮುದ್ರಕ್ಕೆ ಹಾಕಿದ ಬಳಿಕ ನೋಡುತ್ತೇನೆ ಅನ್ನುವುದು ಸರಿಯಲ್ಲ. ಇಳಿಕೆ ಪ್ರದೇಶ ಆಗಿರುವುದರಿಂದ ಮರಳು ರಾಶಿಯ ಮೂಲಕ ಪರಿಹಾರ ಕಂಡುಕೊಳ್ಳಲು ಮುಂದಾದಲ್ಲಿ, ಮರಳು ರಾಶಿ ಕೇರಳದ ಭಾಗಕ್ಕೆ ಹೋಗುವುದರಲ್ಲಿ ಸಂಶಯವಿಲ್ಲ. ಬಮ್ರ್ಸ್ ಹಾಕಿರುವ ಪ್ರದೇಶದಲ್ಲಿ ಮರಳು ದಾಸ್ತಾನು ಆಗಬೇಕು. ಅದು ಎಷ್ಟು ಪ್ರಮಾಣದಲ್ಲಿ ಆಗುತ್ತಿದೆ ಅನ್ನುವ ಕುರಿತ ವರದಿ ಸಂಗ್ರಹಿಸಬೇಕು. ಅದಕ್ಕಾಗಿ ಚೆನ್ನೈನಲ್ಲಿರುವ ಕೋಸ್ಟಲ್ ವೇವ್ ಕನ್ಸಲ್ಟೆನ್ಸಿ ಸಂಸ್ಥೆಯವರನ್ನು ಕರೆಸಿ, ವರದಿ ಸಂಗ್ರಹಿಸಿ. ಈ ಕುರಿತು ಸಚಿವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲಾಗುವುದು ಎಂದರು.
ಓದಿ:ಮಹಿಳೆ ಮೇಲೆ ಡೆಲಿವರಿ ಬಾಯ್ ಹಲ್ಲೆ ಆರೋಪ ಪ್ರಕರಣ: ಜೊಮ್ಯಾಟೊ ಕಂಪನಿ ಸಹ-ಸಂಸ್ಥಾಪಕ ಹೇಳಿದ್ದೇನು ?