ಮಂಗಳೂರು:ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ಯಾವುದೇ ಹೊಸ ಯೋಜನೆಗಳಿಗೆ ಚಾಲನೆ ನೀಡಿಲ್ಲ ಎಂದು ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್ ಟೀಕಿಸಿದ್ದಾರೆ.
ಬಿಜೆಪಿ ಬಂದ ಬಳಿಕ ಮಂಗಳೂರಿನಲ್ಲಿ ಯಾವುದೇ ಹೊಸ ಯೋಜನೆ ಆರಂಭಿಸಿಲ್ಲ: ಅಬ್ದುಲ್ ರವೂಫ್
ಬಿಜೆಪಿ ಅಧಿಕಾರಕ್ಕೆ ಬಂದ ತರುವಾಯ ಮಂಗಳೂರಿನಲ್ಲಿ ಯಾವುದೇ ಹೊಸ ಯೋಜನೆಗಳನ್ನು ಕೈಗೊಂಡಿಲ್ಲ ಎಂದು ಮಂಗಳೂರು ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್ ಆರೋಪಿಸಿದ್ದಾರೆ.
ಆದರೂ ಶಾಸಕ ವೇದವ್ಯಾಸ ಕಾಮತ್ ಅವರು ನಗರದ ಎಲ್ಲಾ ಮಾರುಕಟ್ಟೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ಹೇಳುತ್ತಾರೆ. ಅಂದರೆ ಕಾಂಗ್ರೆಸ್ ಆಡಳಿತದಲ್ಲಿರುವಾಗ ಶಿಲಾನ್ಯಾಸ ನೆರವೇರಿಸಿ ಕಾಮಗಾರಿ ಆರಂಭಿಸಿರುವ ಮಾರುಕಟ್ಟೆಗಳನ್ನು ಮೇಲ್ದರ್ಜೆಗೆ ಏರಿಸುವುದೇ ಎಂದು ಮಂಗಳೂರು ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್ ಟೀಕಿಸಿದರು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಶಾಸಕ ವೇದವ್ಯಾಸ ಕಾಮತ್ ಅವರು ಮಾರುಕಟ್ಟೆ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಹೇಳಿರೋದು ಅಪ್ಪಟ ಸುಳ್ಳು ಎಂದ್ರು.
ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್ ಮಂಗಳೂರು ಮನಪಾ ಆಡಳಿತ ವಹಿಸಿತ್ತು. ಆ ಸಂದರ್ಭ ನಗರದ ಸುರತ್ಕಲ್, ಕಾವೂರು, ಅಳಕೆ, ಜೆಪ್ಪು, ಬಿಜೈ, ಕಂಕನಾಡಿ ಹಾಗೂ ಕದ್ರಿ ಸೇರಿ ಎಂಟು ಮಾರುಕಟ್ಟೆಗಳಿಗೆ ಚಾಲನೆ ನೀಡಿದ್ದೆವು. ಸುರತ್ಕಲ್ ಮಾರುಕಟ್ಟೆಗೆ 60 ಕೋಟಿ ರೂ. ಅನುದಾನ ನೀಡಲಾಗಿದ್ದು, ಹಿಂದೆ ಶಾಸಕ ಮೊಯ್ದೀನ್ ಬಾವಾ ಇರುವಾಗ 20 ಕೋಟಿ ರೂ. ಕಾಮಗಾರಿ ಈಗಾಗಲೇ ನಡೆದಿದ್ದು, ಆದರೆ ಬಳಿಕ ಉಳಿದ ಕಾಮಗಾರಿ ನಿಂತಿದೆ. ಬಿಜೈ ಮಾರುಕಟ್ಟೆಯನ್ನು ಈಗಾಗಲೇ ಪೂರ್ಣಗೊಳಿಸಿ ಬಿಟ್ಟುಕೊಡಲಾಗಿದೆ. ಆ ಬಳಿಕ ಚುನಾವಣೆ ನಡೆದು ಬಿಜೆಪಿಯವರು ಮೂರು ವರ್ಷಗಳಿಂದ ಆಡಳಿತ ನಡೆಸುತ್ತಿದ್ದಾರೆ. ಆದರೆ ಈವರೆಗೆ ಯಾವುದೇ ಹೊಸ ಯೋಜನೆಯನ್ನು ಮಾಡಿಲ್ಲ ಎಂದು ಹೇಳಿದರು.
ಈಗ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಡೆಯುವ ರಸ್ತೆ, ಫುಟ್ಪಾತ್, ಮಾರುಕಟ್ಟೆ ಎಲ್ಲಾ ಕಾಮಗಾರಿಯು ಕಾಂಗ್ರೆಸ್ ಅವಧಿಯಲ್ಲಿ ಆಗಿರುವ ಕಾಮಗಾರಿಗಳು. ನಾವು 2017ರಲ್ಲಿ 87 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇವೆ. ಅದಕ್ಕೆ 121 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿ, ಕೌನ್ಸಿಲ್ ನಲ್ಲಿ ಅನುಮೋದನೆ ನೀಡಿದ್ದೇವೆ. ಅದಕ್ಕೆ ಬೇಕಾದ ದಾಖಲೆಗಳೂ ನಮ್ಮಲ್ಲಿವೆ ಎಂದ್ರು.
ಈ ಸಂದರ್ಭ ಮಾಜಿ ಮೇಯರ್ ಶಶಿಧರ ಹೆಗ್ಡೆ, ಮಂಗಳೂರು ಮನಪಾ ಸದಸ್ಯರಾದ ಅನಿಲ್ ಡಿಸೋಜ, ಎ.ಸಿ.ವಿನಯ್ ರಾಜ್, ಪ್ರವೀಣ್ ಚಂದ್ರ ಆಳ್ವ, ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.