ದಕ್ಷಿಣ ಕನ್ನಡ: ಭಾನುವಾರ ರಾತ್ರಿ 9 ಗಂಟೆಗೆ ದೇಶದ ಪ್ರಜೆಗಳು ಮನೆಯಲ್ಲಿ ಇರುವಂತಹ ಜ್ಯೋತಿ ಬೆಳಗಿಸಿ ತಾವು ಕೂಡಾ ಜ್ಯೋತಿಯ ಜತೆ ಐಕ್ಯವಾಗಬೇಕು. ಎಲ್ಲಾ ಸುಖ ದುಃಖದೊಂದಿಗೆ ಬೆರೆಯಬೇಕು. ಜ್ಯೋತಿಯ ಫಲವಾಗಿ ನಮ್ಮ ನಾಡು, ರಾಷ್ಟ್ರ, ವಿಶ್ವಕ್ಕೆ ಶುಭವಾಗಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ನಮ್ಮ ಭಾರತ ದೇಶದ ಪ್ರಜೆಗಳೆಲ್ಲರೂ ಒಗ್ಗಟ್ಟಾಗಿದ್ದೇವೆ, ಒಂದಾಗಿದ್ದೇವೆ ಮತ್ತು ವಿಶ್ವದ ಜತೆಗೆ ನಾವು ಕೈಜೋಡಿಸಿದ್ದೇವೆ. ಈ ಕೈ ಜೋಡಿಸುವಿಕೆ ಎರಡು ರೀತಿಯಿದೆ. ಒಂದು ಕೊರೊನಾ ವ್ಯಾಧಿ ಇಂದು ವಿಶ್ವದ ಎಲ್ಲಾ ದೇಶಗಳಿಗೂ ಪಸರಿಸಿದೆ. ಅದರ ವಿರುದ್ದ ಹೋರಾಟ ಮಾಡುವಲ್ಲಿಯೂ ನಾವು ವಿಶೇಷವಾದ ಪ್ರಜ್ಞೆ, ಏಕತೆ, ಸಂಘಟನೆಯನ್ನು ತೋರಿಸಿದ್ದೇವೆ.
ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ ಎಂಬ ಮಾತಿನಂತೆ ಯಾವ ಜಾತಿ-ಮತ ಸಂಪ್ರದಾಯ ಇರಲಿ, ಅವನು ಚಕ್ರವರ್ತಿಯೇ ಇರಲಿ. ಅವನು ಶ್ರೀಸಾಮಾನ್ಯನೇ ಇರಲಿ. ಅವನ ಮನೆಯಲ್ಲಿರುವ ಜ್ಯೋತಿ ಒಂದೇ ಬೆಲೆಯದ್ದಾಗಿರುತ್ತದೆ. ಒಂದೇ ರೀತಿಯ ಪ್ರಕಾಶ ಕೊಡುತ್ತದೆ. ಅದಕ್ಕಾಗಿ ನಾವು ನಮ್ಮ ಅಂತಸ್ತು ಮತ್ತು ಇತರ ಎಲ್ಲಾ ಪ್ರಾದೇಶಿಕ ವಿಚಾರಗಳನ್ನು ಮರೆತು ನಮ್ಮ ನಮ್ಮ ಮನೆಯಲ್ಲಿ ಜ್ಯೋತಿ ಹಚ್ಚಬೇಕು.
ರಾತ್ರಿ ಜ್ಯೋತಿಯನ್ನು ಹಚ್ಚಬೇಕು ಎಂದು ಮಾನ್ಯ ಪ್ರಧಾನಿ ಹೇಳಿದ್ದಾರೆ. ಇದನ್ನು ನೀವೆಲ್ಲರೂ ದಯವಿಟ್ಟು ಪ್ರೀತಿಯಿಂದ ಸ್ವೀಕರಿಸಿ. ಭಾನುವಾರ ರಾತ್ರಿ ಒಂಭತ್ತು ಗಂಟೆ ಒಂಭತ್ತು ನಿಮಿಷಕ್ಕೆ ಜ್ಯೋತಿ ಹಚ್ಚಿ ಶುಭ ಹಾರೈಸಿ. ಮನಸ್ಸಿನ ಕತ್ತಲೆಯನ್ನು ಓಡಿಸಿ, ದೇಶದಿಂದ ಈ ಕ್ರೂರವಾದಂತಹ ಕೊರೊನಾ ರಾಕ್ಷಸನನ್ನು ಓಡಿಸಿ ಎಂಬ ಸಂದೇಶ ಕೊಡುತ್ತೇನೆ. ನಾವು ಕೂಡಾ ಧರ್ಮಸ್ಥಳ ದೇವಸ್ಥಾನದಲ್ಲಿ ರಾತ್ರಿ ಈ ಜ್ಯೋತಿಯನ್ನು ಹಚ್ಚುತ್ತೇವೆ. ಇದರ ಫಲವಾಗಿ ನಮ್ಮ ನಾಡು, ರಾಷ್ಟ್ರ, ವಿಶ್ವಕ್ಕೆ ಶುಭವಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.