ಮಂಗಳೂರು:ಕರಾವಳಿಯಲ್ಲಿ ಆಟಿ ( ಆಷಾಡ) ತಿಂಗಳೆಂದರೆ ವಿಶೇಷ ಮಹತ್ವ. ಅದರಲ್ಲೂ ಆಟಿ ಅಮಾವಾಸ್ಯೆ ದಿನ ವೆಂದರೆ ಕರಾವಳಿ ಜನರು ಸಂಭ್ರಮದಿಂದ ಆಚರಿಸುತ್ತಾರೆ. ಈ ದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಹಾಳೆ ಮರದ ಕಷಾಯ ಸೇವನೆ ಮಾಡುವುದು ಕೂಡ ವಿಶೇಷ. ಇಂದು ಆಟಿ ಅಮಾವಾಸ್ಯೆ ಆದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮೂಹಿಕ ಕಷಾಯ ಸೇವನೆ ನಡೆಯಿತು.
ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಈ ಆಚರಣೆ ಬಹಳ ಹಿಂದಿನಿಂದಲೂ ಇದೆ. ಆಟಿ ಅಮಾವಾಸ್ಯೆ ದಿನ ಹಾಳೆ ಮರದಲ್ಲಿ ವಿಶೇಷ ಔಷಧೀಯ ಗುಣ ಇರುತ್ತೆ ಎಂಬ ನಂಬಿಕೆಯಿದ್ದು ಅದಕ್ಕಾಗಿ ಸೂರ್ಯೋದಯಕ್ಕೂ ಮುಂಚೆ ಹಾಳೆ ಮರದ ತೊಗಟೆಯನ್ನು ತಂದು ಅದರಿಂದ ಕಷಾಯ ಮಾಡಲಾಗುತ್ತದೆ.ಹಾಳೆ ಮರದ ತೊಗಟೆಯನ್ನು ಕಲ್ಲಿನಿಂದ ಜಜ್ಜಿ ತೆಗೆದು ಅದನ್ನು ಮನೆಗೆ ಕೊಂಡೋಗಿ ಕರಿ ಮೆಣಸು, ಬೆಳ್ಳುಳ್ಳಿ, ಓಮ ಸೇರಿಸಿ ಕಷಾಯ ಮಾಡಲಾಗುತ್ತದೆ. ಅದನ್ನು ನಸುಕಿನಲ್ಲಿ ಖಾಲಿ ಹೊಟ್ಟೆಗೆ ಸೇವಿಸಲಾಗುತ್ತದೆ.