ಮಂಗಳೂರು: ಪಣಂಬೂರು ಬೀಚ್ಗೆ ಹೋಗಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪದಡಿ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಅಳಪೆ ಮಠದ ಹತ್ತಿರದ ನಿವಾಸಿ ದೀಕ್ಷಿತ್ ಯಾನೆ ದೀಕ್ಷಿತ್ ಅಳಪೆ (32) ಮತ್ತು ಅಳಪೆ ಬಜಾಲ್ನ ಲಾಯ್ಡ್ ಪಿಂಟೋ (32) ಬಂಧಿತರು.
ಜು.ಲೈ 21 ರಂದು ಮಂಗಳೂರಿನಲ್ಲಿ ಬ್ಯಾಚುಲರ್ ಆಫ್ ಹಾಸ್ಪಿಟಲ್ ಅಡ್ಮಿಸ್ಟ್ರೇಷನ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಸ್ನೇಹಿತರೊಂದಿಗೆ ಪಣಂಬೂರು ಬೀಚ್ಗೆ ಹೋಗಿ ವಾಪಸ್ ಬರುವಾಗ ಅವರನ್ನು ಆರೋಪಿಗಳು ಹಿಂಬಾಲಿಸಿಕೊಂಡು ಬಂದಿದ್ದರು. ಬಿಜೈ ಕಾಪಿಕಾಡ್ನ 7ನೇ ಕ್ರಾಸ್ನಲ್ಲಿ ವಿದ್ಯಾರ್ಥಿಗಳನ್ನು ತಡೆದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಸ್ಕೂಟರ್ ಮತ್ತು ಮೊಬೈಲ್ ಫೋನ್ಗಳನ್ನು ವಶಪಡಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಪಣಂಬೂರು ಬೀಚ್ಗೆ ತೆರಳಿದ್ದ ವಿದ್ಯಾರ್ಥಿನಿಯೊಬ್ಬರಿಗೆ ಯುವಕರ ಗುಂಪೊಂದು ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪ ಪ್ರಕರಣ ನಿನ್ನೆ ನಡೆದಿತ್ತು. ಮಂಗಳೂರಿನ ಮೆಡಿಕಲ್ ಕಾಲೇಜೊಂದರ 6 ವಿದ್ಯಾರ್ಥಿಗಳು ಶುಕ್ರವಾರ ಸಂಜೆ 5.30ರ ಸುಮಾರಿಗೆ ಪಣಂಬೂರು ಬೀಚ್ಗೆ ಹೋಗಿದ್ದಾರೆ. ಯುವಕರು ಬೈಕ್ನಲ್ಲಿ ಬಂದಿದ್ದರೆ, ಯುವತಿಯರು ಬಸ್ನಲ್ಲಿ ತೆರಳಿದ್ದರು. ಇವರು ಬೀಚ್ನಲ್ಲಿದ್ದ ವೇಳೆ ಇಬ್ಬರು ಅಪರಿಚಿತರು ಇವರ ಚಲನವಲನಗಳನ್ನು ಗಮನಿಸುತ್ತ, ಮೊಬೈಲ್ ಫೋನ್ಗಳಲ್ಲಿ ವಿಡಿಯೋ ಮಾಡಿದ್ದರು.