ಬಂಟ್ವಾಳ(ದಕ್ಷಿಣ ಕನ್ನಡ):ಜಾನುವಾರುಗಳ ಚರ್ಮ ಗಂಟು ರೋಗ ದಕ್ಷಿಣ ಕನ್ನಡ ಜಿಲ್ಲೆಗೂ ವಕ್ಕರಿಸಿದೆ. ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದ ಒಂದೇ ಮನೆಯ ಮೂರು ದನಗಳಲ್ಲಿ ರೋಗ ಪತ್ತೆಯಾಗಿವೆ.
ಇದು ಜಿಲ್ಲೆಯ ಮೊದಲ ಶಂಕಿತ ಪ್ರಕರಣವಾಗಿದ್ದು, ಈಗಾಗಲೇ ಸುತ್ತಮುತ್ತಲ ಪ್ರದೇಶದಲ್ಲಿ ಲಸಿಕೆ ಹಾಗೂ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಕಾರ್ಯವನ್ನು ಪಶುಪಾಲನಾ ಇಲಾಖೆಯಿಂದ ನಡೆಸಲಾಗಿದೆ. ಜಿಲ್ಲೆಗೆ ಬಂದಿರುವ 2 ಸಾವಿರ ಲಸಿಕೆಗಳನ್ನು ಈಗಾಗಲೇ ನೀಡಲಾಗಿದ್ದು, ಹೆಚ್ಚಿನ ಲಸಿಕೆಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಜತೆಗೆ ಸತ್ತಿರುವ ದನಕ್ಕೆ ಸರ್ಕಾರದಿಂದ ಸಿಗುವ ಪರಿಹಾರಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದ.ಕ ಜಿಲ್ಲಾ ಪಶು ಪಾಲನಾ ಇಲಾಖೆಯ ಮಾಹಿತಿ ಪ್ರಕಾರ, ಬಿಳಿಯೂರಿನ ಮಲ್ಲಡ್ಕದಲ್ಲಿ ಕಾಣಿಸಿಕೊಂಡ ಶಂಕಿತ ಪ್ರಕರಣಕ್ಕೆ ಅ. 8ರಿಂದ ಕೆಎಂಎಫ್ ವೈದ್ಯರು ಚಿಕಿತ್ಸೆ ನೀಡಿದ್ದು, ಆದರೆ ಒಂದು ದನ ಅ. 11ರಂದು ಮೃತಪಟ್ಟಿದೆ. ಆದರೆ, ಉಳಿದ ಎರಡು ದನಗಳು ಗುಣಮುಖವಾಗಿವೆ. ಸತ್ತಿರುವ ದನ ಚರ್ಮಗಂಟು ರೋಗದಿಂದ ಸತ್ತಿಲ್ಲ, ಬದಲಾಗಿ ಅದಕ್ಕೆ ಬೇರೆ ಕಾಯಿಲೆಯೂ ಇತ್ತು ಎನ್ನಲಾಗಿದೆ.