ಸುಳ್ಯ:ರೈಲ್ವೇ ಹಳಿಯಲ್ಲಿದ್ದ ವ್ಯಕ್ತಿಯೊಬ್ಬರನ್ನು ಗಮನಿಸಿದ ಲೋಕೊಪೈಲಟ್ ತಕ್ಷಣ ರೈಲಿನ ವೇಗ ಕಡಿಮೆ ಮಾಡಿ, ವ್ಯಕ್ತಿಯ ಪ್ರಾಣ ಉಳಿಸಿದ ಘಟನೆ ಸೆ. 5 ರ ಸಂಜೆ ನಡೆದಿದ್ದು, ಗಾಯಗೊಂಡ ವ್ಯಕ್ತಿಯನ್ನು ಅದೇ ರೈಲಿನಲ್ಲಿ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಕರೆತಂದು ಬಳಿಕ ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ದಾಖಲಿಸಿ ಪ್ರಾಣ ಉಳಿಸಿದ್ದಾರೆ.
ಬೆಂಗಳೂರಿನಿಂದ ಕುಕ್ಕೆ ಸುಬ್ರಮಣ್ಯ ರೋಡ್, ಪುತ್ತೂರು ರೈಲ್ವೇ ನಿಲ್ದಾಣವಾಗಿ ಕಾರವಾರಕ್ಕೆ ಬರುತ್ತಿದ್ದ ಪ್ರಯಾಣಿಕ ರೈಲು ನರಿಮೊಗರು ಮತ್ತು ಎಡಮಂಗಲ ರೈಲ್ವೆ ನಿಲ್ದಾಣದ ಮಧ್ಯೆ ಬರುತ್ತಿದ್ದಂತೆ ಸುಮಾರು 45 ವರ್ಷದ ವ್ಯಕ್ತಿಯೊಬ್ವರು ರೈಲ್ವೆ ಹಳಿಯಲ್ಲೇ ಹೋಗುತ್ತಿರುವುದನ್ನು ಗಮನಿಸಿ ರೈಲಿನ ಲೋಕೋ ಪೈಲಟ್ ವೇಗದಲ್ಲಿದ್ದ ರೈಲಿನ ವೇಗವನ್ನು ನಿಯಂತ್ರಣ ಮಾಡಿದ್ದಾರೆ. ಆದರೂ ನಿಧಾನವಾಗಿ ರೈಲು ಸಂಚರಿಸುತ್ತಿದ್ದರಿಂದ ವ್ಯಕ್ತಿಗೆ ಸ್ವಲ್ಪ ಮಟ್ಟಿಗೆ ಗಾಯವಾಗಿದೆ.
ಡಿಕ್ಕಿಯ ರಭಸಕ್ಕೆ ವ್ಯಕ್ತಿಯ ತಲೆಗೆ ಗಾಯವಾಗಿದೆ. ಈ ಸಮಯದಲ್ಲಿ ತಕ್ಷಣಕ್ಕೆ ಆ ಜಾಗದಲ್ಲಿ ಯಾವ ವ್ಯವಸ್ಥೆಯೂ ಇಲ್ಲದ ಹಿನ್ನೆಲೆ ಅದೇ ರೈಲಿನಲ್ಲಿದ್ದ ರೈಲ್ವೇ ಟಿಕೆಟ್ ಇನ್ಸ್ಪೆಕ್ಟರ್ ವಿಠಲ್ ನಾಯಕ್ ಮತ್ತು ಗಾರ್ಡ್ಗಳು ಗಾಯಾಳುವನ್ನು ಅದೇ ರೈಲಿನಲ್ಲಿ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಕರೆದುಕೊಂಡು ಬಂದಿದ್ದಾರೆ. ಈ ನಡುವೆ ವಿಠಲ್ ನಾಯಕ್ ಅವರು ಪುತ್ತೂರು ರೈಲ್ವೇ ಸ್ಟೇಷನ್ ಮಾಸ್ಟರ್ ಹರಿಚರಣ್ ಯಾದವ್ ಅವರಿಗೆ ವಯರ್ ಲೆಸ್ ಮೂಲಕ ಮಾಹಿತಿ ನೀಡಿ ರೈಲ್ವೆ ಸ್ಟೇಷನ್ಗೆ ಆ್ಯಂಬುಲೆನ್ಸ್ ತರಿಸುವಂತೆ ವಿನಂತಿ ಮಾಡಿದ್ದಾರೆ.
ಹಾಗಾಗಿ, ರೈಲು ಪುತ್ತೂರಿಗೆ ತಲುಪುತ್ತಲೇ ರೈಲಿನಿಂದ ಗಾಯಾಳುವನ್ನು ಆ್ಯಂಬುಲೆನ್ಸ್ ಮೂಲಕ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಒಟ್ಟಿನಲ್ಲಿ ರೈಲ್ವೇ ಪೈಲಟ್ನ ಸಮಯಪ್ರಜ್ಞೆಯಿಂದ ಮತ್ತು ರೈಲ್ವೆ ಅಧಿಕಾರಿಗಳ ಟೀಮ್ ವರ್ಕ್ನಿಂದಾಗಿ ವ್ಯಕ್ತಿಯೊಬ್ಬರ ಪ್ರಾಣ ಉಳಿದಿರೋದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಓದಿ:ಸಾಲ ಪಡೆದು ಪೊಲೀಸರ ಬಲೆಗೆ ಬಿದ್ದ ಹಳೆ ಪ್ರಕರಣದ ಆರೋಪಿ!