ಸುಳ್ಯ (ದಕ್ಷಿಣ ಕನ್ನಡ):ಕೊರೊನಾ ಸೋಂಕು ಹರಡುವಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲಾಡಳಿತವು ಇಂದಿನಿಂದ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಿದೆ.
ಜಿಲ್ಲೆಯ ಸುಳ್ಯ ಹಾಗೂ ಕಡಬ ತಾಲೂಕುಗಳಲ್ಲಿ ಬೆಳಗ್ಗೆ 11 ಗಂಟೆಯ ಬಳಿಕ ಲಾಕ್‌ಡೌನ್ ಯಶಸ್ವಿಯಾಗಿದೆ. ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿದ್ದರೂ ಗ್ರಾಹಕರ ಸಂಖ್ಯೆ ಮಾತ್ರ ವಿರಳವಾಗಿತ್ತು. ಆಸ್ಪತ್ರೆ, ಮೆಡಿಕಲ್ ಶಾಪ್‌ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.
ಕೆಲವೊಂದು ದ್ವಿಚಕ್ರ ವಾಹನ, ಸರಕು ಸಾಗಾಟದ ವಾಹನ, ರಿಕ್ಷಾ ಹಾಗೂ ಕೆಲವೊಂದು ಅಗತ್ಯ ಖಾಸಗಿ ವಾಹನಗಳು ಮಾತ್ರ ಓಡಾಡುತ್ತಿವೆ. ರಾಷ್ಟ್ರೀಕೃತ ಬ್ಯಾಂಕ್ಗಳು, ಖಾಸಗಿ ಹಣಕಾಸು ಸಂಸ್ಥೆಗಳು, ಅಗತ್ಯ ಸೇವೆಗಳ ಕಚೇರಿಗಳು ತೆರೆದಿದೆ. ಆದರೆ ಎಲ್ಲೂ ಗ್ರಾಹಕರ ಸಂಖ್ಯೆ ಮಾತ್ರ ಕಂಡು ಬರುತ್ತಿಲ್ಲ.
ಸುಳ್ಯ ಹಾಗೂ ಕಡಬ ತಾಲೂಕಿನಲ್ಲಿ ಲಾಕ್‌ಡೌನ್ ಯಶಸ್ವಿ ಕಡಬ, ಸುಳ್ಯ, ಸುಬ್ರಹ್ಮಣ್ಯ, ಉಪ್ಪಿನಂಗಡಿ, ಬೆಳ್ಳಾರೆ ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಿ ತಪಾಸಣಾ ನಿರತರಾಗಿದ್ದಾರೆ. ಪೇಟೆಗೆ ಬರುವವರನ್ನು ವಿಚಾರಿಸಿ ಅನಗತ್ಯವಾಗಿ ಬರುವವರನ್ನು ವಾಪಸು ಮನೆಗೆ ಕಳಿಸುವ ಕೆಲಸವನ್ನು ಕಟ್ಟುನಿಟ್ಟಾಗಿ ಮಾಡುತ್ತಿದ್ದಾರೆ.
ಇದರ ಜೊತೆಗೆ ಠಾಣಾಧಿಕಾರಿಗಳ ನೇತೃತ್ವದಲ್ಲಿ ಆಯಾ ಪ್ರದೇಶಗಳಲ್ಲಿ ಗಸ್ತು ತಿರುಗುವಿಕೆ ನಡೆಯುತ್ತಿದ್ದು, ಒಟ್ಟಿನಲ್ಲಿ ಇಂದು ಜನರೇ ಪೇಟೆಗಳಿಗೆ ಬಾರದ ದೃಶ್ಯಗಳು ಸಾಮಾನ್ಯವಾಗಿವೆ.