ಸುಳ್ಯ: ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಸಂಯುಕ್ತ ರಾಷ್ಟ್ರ ಸಂಸ್ಥೆಯು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಇಂದು 8ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ನೆಲ್ಯಾಡಿ ಬೆಥನಿ ಜ್ಞಾನೋದಯ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಯೋಗ ದಿನಾಚರಣೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ವಿನ್ನರ್ ಪುಟ್ಟ ಪ್ರತಿಭೆಯೊಬ್ಬಳ ಯೋಗಭ್ಯಾಸದಿಂದ ವಿಶೇಷ ಗಮನ ಸೆಳೆಯಿತು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ತರಬೇತಿ ತಂಡದಿಂದ ತರಬೇತಿ ಪಡೆದ ಶಿಕ್ಷಕರ ವಿಶೇಷ ತರಬೇತಿಯಲ್ಲಿ ಕಡಬ ತಾಲೂಕಿನ ನೆಲ್ಯಾಡಿ ಬೆಥನಿ ಜ್ಞಾನೋದಯ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ ಜರುಗಿತು.
ನರೇಂದ್ರ ಮೋದಿ ಅವರೇ ಪ್ರೇರಣೆ:ಈ ಸಮಯದಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ವಿಜೇತೆ, ಬೆಥನಿ ಜ್ಞಾನೋದಯ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿರುವ ಪುಟ್ಟ ಪ್ರತಿಭೆ ಪುತ್ತೂರು ತೊಟ್ಲಾ ನಿವಾಸಿ ಅವಿನಾಶ್ ರೈ ಹಾಗೂ ಸಂಧ್ಯಾ ದಂಪತಿಯ ಪುತ್ರಿ ಕುಮಾರಿ ಆರಾಧ್ಯ ರೈ ಅವರ ಯೋಗಭ್ಯಾಸ ನೆರೆದವರಲ್ಲಿ ಅಚ್ಚರಿ ಮೂಡಿಸಿದೆ. ಆರಾಧ್ಯ ಅವರು ಸುಳ್ಯದ ಯೋಗ ಶಿಕ್ಷಕ ಶರತ್ ಅವರಿಂದ ಯೋಗ ತರಬೇತಿ ಪಡೆದಿದ್ದು, ಭಾರತದ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರೇ ನನಗೆ ಪ್ರೇರಣೆ ಎಂದಿದ್ದಾರೆ. ಮುಂದೆ ಡಾಕ್ಟರ್ ಆಗುವ ಕನಸನ್ನು ಅವರು ಹೊತ್ತಿದ್ದಾರೆ.