ಮಂಗಳೂರು (ದಕ್ಷಿಣ ಕನ್ನಡ) :ಕಾಂಗ್ರೆಸ್ ಪಕ್ಷವು ಲಿಂಗಾಯತರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸವಾಲೆಸೆದರು. ಮಂಗಳೂರಿನಲ್ಲಿಂದು ಮಾತನಾಡಿದ ಅವರು, ನಾವು ಯಡಿಯೂರಪ್ಪ ಮಾರ್ಗದರ್ಶನ ಮತ್ತು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತಿದ್ದೇವೆ. ಎಲ್ಲ ಸಂದರ್ಭದಲ್ಲಿಯೂ ಬಿಜೆಪಿ ಮಾತ್ರ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡುತ್ತದೆ. ಬೇರೆ ಯಾವ ಪಾರ್ಟಿಗೂ ಆ ತಾಕತ್ತಿಲ್ಲ, ಇದ್ದರೆ ಘೋಷಣೆ ಮಾಡಲಿ ಎಂದು ಹೇಳಿದರು.
ಕಾಂಗ್ರೆಸ್ಗೆ ಬಹಳ ಕ್ಷೇತ್ರಗಳಲ್ಲಿ ಅಭ್ಯರ್ಥಿ ಕೊರತೆ ಇದ್ದು, ಡಿಸೆಂಬರ್ನಲ್ಲೇ ಅವರು ಆಯ್ಕೆ ಪ್ರಕ್ರಿಯೆ ಆರಂಭಿಸಿದರೂ ಈವರೆಗೆ ಆಗಿಲ್ಲ. ನಾವು ಹತ್ತು ದಿವಸದಲ್ಲಿ ಪ್ರಕ್ರಿಯೆ ಮುಗಿಸಿದ್ದೇವೆ. ಹೀಗಾಗಿ ನಮ್ಮ ಬಂಡುಕೋರರಾಗಿ ಹೊರಬರುವ ಅಭ್ಯರ್ಥಿಗಳನ್ನು ಕಾಯುತ್ತಾ ಇದ್ದಾರೆ. ಕಾಂಗ್ರೆಸ್ನ ಹೀನಾಯ ಸ್ಥಿತಿ ನೋಡಿ ಬೇಜಾರಾಗುತ್ತಿದೆ. ಅವರಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗೆ ಫೈಟ್ ನಡೀತಾ ಇದೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಖರ್ಗೆ ಜೊತೆ ಈಗ ಪರಮೇಶ್ವರ್ ರೇಸ್ನಲ್ಲಿದ್ದಾರೆ ಎಂದರು.
ಜಗದೀಶ್ ಶೆಟ್ಟರ್ ಹೇಳಿಕೆ ವಿಚಾರ: ಬಿಜೆಪಿ ಸಂಘಟನಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾನಸಪುತ್ರನಿಗೆ ಟಿಕೆಟ್ ನೀಡಿದ್ದಾರೆ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಟೀಲ್, ಶೆಟ್ಟರ್ ಹಿರಿಯರ ಮನವೊಲಿಕೆ ನಂತರವೂ ಬಿಜೆಪಿ ಬಿಟ್ಟಿದ್ದಾರೆ. ಕೊನೆಯತನಕ ಪ್ರಯತ್ನ ಆಗಿದ್ದು, ರಾಷ್ಟ್ರೀಯ ನಾಯಕರು ಮನೆ ಬಾಗಿಲಿಗೆ ಹೋದರೂ ಗೌರವ ಕೊಡದೇ ಹೋಗಿದ್ದಾರೆ. ಮಾನಸಿಕವಾಗಿ ಯಾವುದೋ ಕಾರಣಕ್ಕೆ ಪಕ್ಷ ಬಿಡುವ ತೀರ್ಮಾನ ತೆಗೊಂಡಿದ್ದಾರೆ. ಕಾಂಗ್ರೆಸ್ ಅವರನ್ನು ಹೇಗೆ ನಡೆಸಿಕೊಳ್ಳುತ್ತೆ ಅನ್ನೋದನ್ನು ಕಾದು ನೋಡುತ್ತೇವೆ ಎಂದು ಹೇಳಿದರು.
ರಾಷ್ಟ್ರದಲ್ಲಿ ನಮ್ಮ ಪಕ್ಷಕ್ಕೆ ಅದರದ್ದೇ ಆದ ನಿಯಮಗಳಿವೆ. ಪಕ್ಷದಲ್ಲಿ ಬಹಳ ವರ್ಷ ದುಡಿದವರು ಜಗದೀಶ್ ಶೆಟ್ಟರ್. ನಮ್ಮಲ್ಲಿ ಪಾರ್ಲಿಮೆಂಟರಿ ಬೋರ್ಡ್, ಎಲೆಕ್ಷನ್ ಕಮಿಟಿ ನಿರ್ವಹಣೆ ಮಾಡಿ ಅಭ್ಯರ್ಥಿ ಆಯ್ಕೆ ಆಗುತ್ತೆ. ಯಾರೋ ಒಬ್ಬ ನಮ್ಮಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಲ್ಲ. ಎಲ್ಲ ಒಮ್ಮತದ ಅಭಿಪ್ರಾಯದ ಮೇಲೆ ಚುನಾವಣಾ ಪ್ರಕ್ರಿಯೆ ನಡೆಯುತ್ತೆ. ನಾವು ಮತಗಟ್ಟೆ ಕಾರ್ಯಕರ್ತರ ಓಟ್ ನಲ್ಲಿ ಅಭಿಪ್ರಾಯ ಸಂಗ್ರಹಿಸುತ್ತೀವಿ. ಶೆಟ್ಟರ್ ಕೂಡ ಪಾರ್ಟಿ ಅಧ್ಯಕ್ಷ ಆಗಿದ್ದವರು. ಇಲ್ಲಿನ ಸಾಮೂಹಿಕ ನಾಯಕತ್ವ ಅವರಿಗೆ ಗೊತ್ತಿದೆ. ಇವತ್ತು ಪಾರ್ಟಿಯಿಂದ ಹೊರಗೆ ಹೋಗಿ ಮಾತನಾಡೋದು ಶೋಭೆ ತರುವಂತದಲ್ಲ. ಸಂತೋಷ್ ಜೀ ನಮ್ಮ ಸಂಘಟನಾ ಕಾರ್ಯದರ್ಶಿ, ಅವರು ಸಂಘಟನೆ ಕಾರ್ಯ ಮಾಡುತ್ತಾರೆ ಎಂದು ನಳೀನ್ ಕುಮಾರ್ ಕಟೀಲ್ ತಿಳಿಸಿದರು.